ಗದಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ನಡೆಸುವಾಗ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಸೂಕ್ತ ನಿಯಮಾವಳಿ ರೂಪಿಸಬೇಕು ಎಂದು ಆಗ್ರಹಿಸಿ ಗದಗ ಜಿಲ್ಲಾ ಸರ್ವ ಜನಿವಾರಧಾರಿಗಳ ಒಕ್ಕೂಟದಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.
ಜನಿವಾರ ಧಾರಣೆ ಮಾಡುವ 28 ಸಮುದಾಯಗಳ ಮುಖಂಡರು, ಮಹಿಳೆಯರು ಹಾಗೂ ಯುವಜನರು ನಗರದ ವಿಠ್ಠಲಾರೂಢ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗದಗ ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ಮಾತನಾಡಿ, ಬೀದರ್ ಹಾಗೂ ಶಿವಮೊಗ್ಗದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಸಿಬ್ಬಂದಿಯನ್ನು ಸೇವೆಯಿಂದಲೇ ವಜಾಗೊಳಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯಾವುದೇ ಪರೀಕ್ಷೆ ನಡೆಸಬೇಕಾದರೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ಕ್ರಮ ಅನುಸರಿಸಬಾರದು. ಜನಿವಾರ ತೆಗೆಸುವುದು, ಬಳೆ, ಮೂಗುತಿ, ಕಾಲುಂಗರ, ತಾಳಿ ತೆಗೆಯುವಂತೆ ಹೇಳುವ ನಿಯಮಗಳನ್ನು ಬದಲು ಮಾಡಬೇಕು ಎಂದು ಒತ್ತಾಯಿಸಿದರು.
ನಕಲು ತಡೆಗಟ್ಟಲು ಇಂದು ಅನೇಕ ತಂತ್ರಜ್ಞಾನಗಳು ಬಂದಿದ್ದು, ವೈಜ್ಞಾನಿಕ ಉಪಕರಣಗಳನ್ನು ಬಳಸುವ ಮೂಲಕ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಎಸ್‌ಎಸ್‌ಕೆ ಸಮಾಜ ಶ್ರೀಕಾಂತ ಖಟವಟೆ, ಮುಖಂಡರಾದ ಶ್ರೀಕಾಂತಸಾ ಕಬಾಡಿ, ಸಂಜೀವ್‌ಕುಮಾರ ಖಟವಟೆ, ದಶರಥರಾಜ ಕೊಳ್ಳಿ, ರತ್ನಾಕರಭಟ್ ಜೋಶಿ, ಬಲವಂತ ಪಾಟೀಲ, ಕೃಷ್ಣಾಜಿ ನಾಡಿಗೇರ, ಅನಿಲ್ ಗಡ್ಡಿ ಸೇರಿದಂತೆ ವಿವಿಧ ಸಮುದಾಯಗಳ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.