ಶಿರಹಟ್ಟಿ: ಮಣ್ಣು ನಂಬಿ ಬಂಡವಾಳ ಹಾಕಿದರೆ ಭೂ ತಾಯಿ ಎಂದಿಗೂ ಕೈಬಿಡುವುದಿಲ್ಲ ಎಂಬ ದೃಢ ನಂಬಿಕೆಯನ್ನು ಪದವೀಧರ ಮಹಾದೇವಪ್ಪ ಮೂರಶಿಳ್ಳಿ ಮತ್ತೆ ಸಾಬೀತು ಮಾಡಿದ್ದಾರೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹರಿಪುರ ಗ್ರಾಮದ ನಿವಾಸಿಯಾದ ಮಹಾದೇವಪ್ಪ ಗ್ರಾಮದ ಹೊರವಲಯದಲ್ಲಿ 1.5 ಎಕರೆ ಜಮೀನು ಹೊಂದಿದ್ದಾರೆ. ತಮ್ಮ ಸಹೋದರರಿಗೆ ಹಂಚಿಕೆಯಾಗಿ ನಂತರ ತಮಗೆ ಬಂದ ಜಮೀನಿನಲ್ಲಿ ಉತ್ತಮ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಎಲ್ಲ ಸಹೋದರರ ಜಮೀನಿಗೂ ಒಂದೇ ಬಾವಿ ಇದೆ.
ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದು, ಇಡೀ ವರ್ಷ ಬೆಳೆ ಬರುವ ಹಾಗೆ ಯೋಜನೆ ರೂಪಿಸಿದ್ದಾರೆ. ಒಂದೊಂದು ಎಕರೆಯ ಎರಡು ಪ್ರತ್ಯೇಕ ಪ್ಲಾಟ್ ಮಾಡಿಕೊಂಡು ಅವರು ಮತ್ತು ಅವರ ಸಹೋದರರು ರೇಷ್ಮೆ ಕೃಷಿ ಮಾಡುತ್ತಿದ್ದಾರೆ.
1992 ರಲ್ಲಿ ಬಿ.ಎ. ಹಾಗೂ ಬಿ.ಇಡಿ ಪದವಿ ಪಡೆದ ಮಹಾದೇವಪ್ಪ ಸರ್ಕಾರಿ ನೌಕರಿಯ ಗೋಜಿಗೆ ಹೋಗದೆ ರೇಷ್ಮೆ ಕೃಷಿಯನ್ನು ಪ್ರಮುಖ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಎರಡು ದಶಕಗಳಿಂದ ಅವರು ರೇಷ್ಮೆ ಕೃಷಿ ಮಾಡಿಕೊಂಡು ಬರುತ್ತಿದ್ದು, ಉತ್ತಮ ಇಳುವರಿ, ಲಾಭ ಪಡೆಯುತ್ತಿದ್ದಾರೆ.
ರೇಷ್ಮೆ ಹುಳುವಿನ ನಿರ್ವಹಣೆ: ಹಿಪ್ಪು ನೇರಳೆ ಬೆಳೆಗೆ ಒತ್ತು ನೀಡುತ್ತಿರುವ ಅವರು ಹೆಚ್ಚು ಹಸಿರೆಲೆ ಗೊಬ್ಬರ, ತಿಪ್ಪೆ ಗೊಬ್ಬರ ಬಳಸಿ ತೋಟದ ನಿರ್ವಹಣೆ ಮಾಡುತ್ತಿದ್ದಾರೆ. ಹುಳು ಸಾಕಣೆ ಘಟಕದಲ್ಲಿ ಸದಾ ಗಾಳಿಯಾಡುವಂತೆ ವ್ಯವಸ್ಥೆ ಮಾಡಿದ್ದಾರೆ. ಸೊಳ್ಳೆ ಅಥವಾ ನೋಣಸಹ ಸುಳಿಯದ ಹಾಗೇ ಪರದೆ ಕಟ್ಟಿದ್ದಾರೆ. ಘಟಕವನ್ನು ಹೆಚ್ಚು ಸ್ವಚ್ಛವಾಗಿಟ್ಟುಕೊಂಡರೆ ಉತ್ತಮ ಹಾಗೂ ಬೇಗ ಇಳುವರಿ ಪಡೆಯಬಹುದು ಎಂಬುದು ಅವರ ಅನುಭವದ ಮಾತು.
ಪ್ರಸ್ತುತ ಮಳೆಗಾಲ ಇರುವುದರಿಂದ ರೇಷ್ಮೆಗೂಡಿನ ಬೆಲೆ ಸ್ವಲ್ಪ ಕಡಿಮೆ ಇದೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹460ರಿಂದ ₹ 500 ದರ ಇದೆ.
ಸಗಣಿ ಗೊಬ್ಬರ ಬಳಕೆ: ಮಹಾದೇವಪ್ಪ ಅವರು ಸಾವಯವ ಕೃಷಿ ಪದ್ಧತಿ ಅವಳವಡಿಸಿಕೊಂಡಿದ್ದಾರೆ. ವರ್ಷಕ್ಕೆ 1.5 ಎಕರೆ ರೇಷ್ಮೆ ಜಮೀನಿಗೆ ಸುಮಾರು 10 ಟ್ರ್ಯಾಕ್ಟರ್ ಸಗಣಿ ಗೊಬ್ಬರ ಹಾಕುತ್ತಾರೆ. ಪ್ರತಿ ಗಾಡಿಗೆ ₹4,000 ಕೊಟ್ಟು ಖರೀದಿಸುತ್ತಾರೆ. ಸಾವಯವ ಗೊಬ್ಬರದಿಂದ ಬೆಳೆಯುವ ಬೆಳೆಗೆ ಯಾವುದೇ ರೋಗ ಬರುವುದಿಲ್ಲ. ಬದಲಾಗಿ ಉತ್ತಮ ಇಳುವರಿ ಬರುತ್ತದೆ. ವರ್ಷಕ್ಕೆ ಒಟ್ಟು ತೋಟದ ನಿರ್ವಹಣೆಗೆ ಸುಮಾರು ₹1.50 ಲಕ್ಷ ಖರ್ಚಾಗುತ್ತಿದೆ.
ಮೈಸೂರು ಮೊಟ್ಟೆ ಸಾಕಣೆ: ಈ ಭಾಗದ ರೈತರು ಸೆಂಟ್ರಲ್ ಸಿಲ್ಕ್ ಬೋರ್ಡ್ ವತಿಯಿಂದ ನೀಡಲಾಗುವ ಮೈಸೂರು ಮೊಟ್ಟೆಗಳನ್ನು (ಹುಳು) ಸಾಕುತ್ತಾರೆ. ಪಾಲ್ಘಾಟ್ ಮೊಟ್ಟೆ, ಗುಜರಾತ್, ಬೆಂಗಳೂರು ಹೀಗೆ ಹಲವಾರು ತಳಿಯ ರೇಷ್ಮೆ ಹುಳುಗಳು ಸಿಗುತ್ತವೆ.
ಒಂದು ವರ್ಷದಲ್ಲಿ 4 ಬೆಳೆಗಳನ್ನು ತೆಗೆಯುತ್ತಿದ್ದು ವರ್ಷಕ್ಕೆ ಸುಮಾರು ₹3 ಲಕ್ಷದಿಂದ ₹4 ಲಕ್ಷ ಆದಾಯ ಸಿಗುತ್ತಿದೆ. ಇದರ ಜತೆಗೆ ತೋಟದಲ್ಲಿನ ತೆಂಗಿನ ಮರಗಳಿಂದ ವರ್ಷಕ್ಕೆ ₹50 ಸಾವಿರ ಲಾಭ ಬರುತ್ತಿದೆ.– ಮಹಾದೇವಪ್ಪ ಮೂರಶಿಳ್ಳಿ, ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.