ಗದಗ: ‘ಕಸ ಸಂಗ್ರಹಣೆ ಮೂಲಕ ಘನತಾಜ್ಯ ವಸ್ತುಗಳನ್ನು ಮೂಲದಲ್ಲಿಯೇ ವೈಜ್ಞಾನಿಕವಾಗಿ ನಿರ್ವಹಣೆ ಮಾಡುವ ಜತೆಗೆ ಗ್ರಾಮದ ಸ್ವಚ್ಛತೆಗೆ ಎಲ್ಲರೂ ಸಹಕರಿಸಬೇಕು’ ಎಂದು ಗದಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್. ತಿಳಿಸಿದರು.
ತಾಲ್ಲೂಕಿನ ನಾಗಾವಿ ಮತ್ತು ಅಸುಂಡಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ಹಾಗೂ ಸ್ವಚ್ಛ ಭಾರತ ಗ್ರಾಮೀಣ ಯೋಜನೆಯಡಿ ಕಸ ಸಂಗ್ರಹಣೆಯ ಸ್ಥಳವನ್ನು ಬುಧವಾರ ಪರಿಶೀಲನೆ ನಡೆಸಿ ಮಾತನಾಡಿದರು.
‘ಮಹಿಳಾ ಸಬಲೀಕರಣಕ್ಕೆ ಸರ್ಕಾರ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಮಹಿಳಾ ಸ್ವ ಸಹಾಯ ಸಂಘದ ಸಹಯೋಗದೊಂದಿಗೆ ಮನೆ, ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ತ್ಯಾಜ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಇನ್ನು ಆಯಾ ಗ್ರಾಮಗಳಲ್ಲಿ ತ್ಯಾಜ್ಯ ಶೇಖರಣೆ- ವಿಂಗಡಣೆ ಮಾಡುವ ಮೂಲಕ ಸ್ವಚ್ಛತೆ ಕಾಪಾಡಲಾಗುತ್ತಿದೆ’ ಎಂದರು.
‘ಪ್ರತಿ ಗ್ರಾಮದಲ್ಲಿ ತ್ಯಾಜ್ಯ ನಿರ್ವಹಣೆ ಸಮಿತಿಯನ್ನು ರಚನೆ ಮಾಡಿ ಸಮಿತಿಯ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಜನರು ಮೂಲದಲ್ಲಿಯೇ ಕಸ ಸಂಗ್ರಹಣೆ ಕಾರ್ಯಕ್ಕೆ ಸಹಕಾರ ನೀಡಬೇಕು’ ಎಂದರು.
ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕುಮಾರ ಪೂಜಾರ, ಪಿಡಿಒ ಮಂಜುಳಾ ಹೊಸಮನಿ, ಬಿ.ಎನ್. ಬಚ್ಚೆನಹಳ್ಳಿ, ಎಸ್‌ಬಿಎಂ ಯೋಜನೆಯ ಸಮಾಲೋಚಕ ಕೃಷ್ಣ ದೊಡ್ಡಮನಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಮಹಿಳಾ ಒಕ್ಕೂಟದ ಸದಸ್ಯರು ಇದ್ದರು.
ಗ್ರಾಮಸ್ಥರೊಂದಿಗೆ ಚರ್ಚೆ
ಗ್ರಾಮೀಣ ಭಾಗದಲ್ಲಿ ಕಸ ಸಂಗ್ರಹಣೆ ವಿಂಗಡಣೆಯ ಜವಾಬ್ದಾರಿಯನ್ನು ಸಂಜೀವಿನಿ ಒಕ್ಕೂಟದ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ವಹಿಸಲಾಗಿದೆ. ಇದರ ಸಮರ್ಪಕ ಬಳಕೆ ಕುರಿತು ನಾಗಾವಿ ಗ್ರಾಮ ಪಂಚಾಯಿತಿಯ ಸ್ವಚ್ಛ ವಾಹಿನಿ ವಾಹನದಲ್ಲಿ ಸಂಚರಿಸಿದ ಸಿಇಒ ಭರತ್ ಎಸ್. ಅವರು ವಾಹನ ಚಾಲನೆಯ ವೀಕ್ಷಣೆ ನಡೆಸಿದರು. ಗ್ರಾಮಸ್ಥರೊಂದಿಗೆ ಕಸ ಸಂಗ್ರಹಣೆ ಮತ್ತು ನಿರ್ವಹಣೆ ಮಾಡುತ್ತಿರುವ ಬಗ್ಗೆ ಚರ್ಚಿಸಿದರು. ನಂತರ ಅಸುಂಡಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.