ಲಕ್ಷ್ಮೇಶ್ವರ: ಪಟ್ಟಣದ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವರ ಜಾತ್ರಾ ಮಹೋತ್ಸವ ಮೇ 6 ರಿಂದ ಆರಂಭವಾಗಿದ್ದು 9ರ ವರೆಗೆ ಜರುಗಲಿದೆ.
ವಿಶಿಷ್ಟ ಮೂರ್ತಿ: ದೇವಸ್ಥಾನದ ಮೂರ್ತಿ ಬಹಳ ಸುಂದರವಾಗಿದೆ. ಪರಮೇಶ್ವರನ ಹಿಂದೆ ಪಾರ್ವತಿ ನಂದಿಯನ್ನೇರಿ ಕುಳಿತ್ತಿದ್ದಾಳೆ. ದಕ್ಷಿಣ ಭಾರತದಲ್ಲಿಯೇ ಪ್ರಥಮ ಮೂರ್ತಿ ಎನ್ನಲಾಗುತ್ತಿದೆ. ಸೋಮನಾಥ ಮೂರ್ತಿ 4 ಅಡಿ ಎತ್ತರ, 3 ಅಡಿ ಅಗಲವಿದೆ. ಈ ಮೂರ್ತಿಯನ್ನು ಶಿವಶರಣ ಆದಯ್ಯನು ಸೌರಾಷ್ಟ್ರದಿಂದ ತಂದು ಸ್ಥಾಪಿಸಿದನೆಂದು ದಾಖಲೆಗಳಲ್ಲಿ ಉಲ್ಲೇಖ ಇದೆ.
ಸುಧಾಮೂರ್ತಿ ಕಳಕಳಿ: ನೂರಾರು ವರ್ಷಗಳಷ್ಟು ಹಳೆಯದಾಗಿದ್ದ ಸೋಮೇಶ್ವರನ ದೇವಸ್ಥಾನವನ್ನು ಇನ್ಫೋಸಿಸ್‍ನ ಸುಧಾ ಮೂರ್ತಿಯವರು ₹5 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿ ದೇವಾಲಯಕ್ಕೆ ಗತವೈಭವದ ಕಳೆಯನ್ನು ತಂದಿದ್ದಾರೆ.
2014ರಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯ ಲೋಕಾರ್ಪಣೆ ಆಗಿದೆ. ಅಂದಿನಿಂದ ಪ್ರತಿವರ್ಷ ಇನ್ಫೋಸಿಸ್‍ನವರು ಪುಲಿಗೆರೆ ಉತ್ಸವವನ್ನು ಆಚರಿಸಕೊಂಡು ಬರುತ್ತಿದ್ದಾರೆ.
ಪ್ರತಿವರ್ಷ ವೈಶಾಖ ಕೃಷ್ಣ ಪಕ್ಷದ ಶುಭದಿನದಂದು ಸೂರ್ಯೋದಯದ ಹೊಂಬಣ್ಣದ ಕಿರಣಗಳು ನೇರವಾಗಿ ಪೂರ್ವಾಭಿಮುಖವಾಗಿರುವ ಸೋಮನಾಥನ ಮೇಲೆ ಬೀಳುವುದು ಇಲ್ಲಿನ ವಿಶೇಷವಾಗಿದೆ. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸುವ ಸಂದರ್ಭದಲ್ಲಿ ಈ ಅದ್ಭುತ ಜರುಗುತ್ತದೆ.
ಮೇ ತಿಂಗಳ ದಿ.25ರಿಂದ 30ರವರೆಗೂ ಪ್ರತಿದಿನ ಮುಂಜಾನೆ 5-58ಕ್ಕೆ ಸೂರ್ಯನ ನೇರ ಕಿರಣಗಳು ಬೀಳುವ ಸುಂದರ ದೃಶ್ಯವನ್ನು ಈಗಲೂ ಕಾಣಬಹುದು. ಸೋಮೇಶ್ವರ ದೇವರ ಜಾತ್ರಾ ಮಹೋತ್ಸವರ ಆರಂಭವಾಗಿದ್ದು ಮೇ 7ರಂದು ಸಂಜೆ 6ಕ್ಕೆ ರಥೋತ್ಸವ, 8ರಂದು ಕಡುಬಿನ ಕಾಳಗ ಹಾಗೂ 9ರಂದು ರಾತ್ರಿ 8ಕ್ಕೆ ಓಕಳಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.