ADVERTISEMENT

ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯ

ತಾಲ್ಲೂಕುಮಟ್ಟದ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಎಂ.ಎಸ್‌.ಕರಿಗೌಡರ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 5:12 IST
Last Updated 2 ಡಿಸೆಂಬರ್ 2022, 5:12 IST
ಗದಗ ತಾಲ್ಲೂಕುಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಚಕ್ಕಡಿ ಓಟದ ಗಮ್ಮತ್ತು
ಗದಗ ತಾಲ್ಲೂಕುಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಚಕ್ಕಡಿ ಓಟದ ಗಮ್ಮತ್ತು   

ಗದಗ: ‘ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ದೇಶದ ಅತ್ಯುತ್ತಮ ಕ್ರೀಡಾಪಟುವಾಗಿ ಬೆಳೆಯುತ್ತಾರೆ’ ಎಂದು ಮಾರ್ಕೆಟಿಂಗ್ ಕಮ್ಯುನಿಕೇಷನ್ ಆ್ಯಂಡ್ ಅಡ್ವಟೈಸಿಂಗ್ ಲಿಮಿಟೆಡ್ ಅಧ್ಯಕ್ಷ ಎಂ.ಎಸ್.ಕರಿಗೌಡರ ಅಭಿಪ್ರಾಯಪಟ್ಟರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ, ಜಿಲ್ಲಾ ಪಂಚಾಯ್ತಿ, ಗದಗ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ತಾಲ್ಲೂಕು ಪಂಚಾಯ್ತಿ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2022-23ನೇ ಸಾಲಿನ ತಾಲ್ಲೂಕುಮಟ್ಟದ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಭಾರತ ಸರ್ಕಾರ ಖೇಲೊ ಇಂಡಿಯಾ ಯೋಜನೆ ಜಾರಿಗೆ ತಂದಿದ್ದು, ಕ್ರೀಡಾಪಟುಗಳು ಇದರ ಸದುಪಯೋಗ ಪಡೆಯಬೇಕು’ ಎಂದರು.

ADVERTISEMENT

ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದ ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿ ಎಲ್.ಗುಂಜಿಕರ, ‘ಕ್ರೀಡೆ ದೈಹಿಕ, ಮಾನಸಿಕ ಸದೃಢತೆಗೆ ಸಹಕಾರಿಯಾಗಲಿದೆ. ಗ್ರಾಮೀಣ ಯುವಕ ಯುವತಿಯರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಗ್ರಾಮೀಣ ಕ್ರೀಡಾಕೂಟ ಆಯೋಜಿಸಿದೆ. ಕ್ರೀಡೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರ ನೌಕರಿಯಲ್ಲಿ ನೇರ ನೇಮಕಾತಿಗೆ ಅವಕಾಶ ಕಲ್ಪಿಸಿದೆ’ ಎಂದು ಹೇಳಿದರು.

ಗದಗ ತಾಲ್ಲೂಕು ಪಂಚಾಯ್ತಿ ಇಒ ಕೃಷ್ಣಪ್ಪ ಧರ್ಮರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ನಿರ್ಣಾಯಕರು ನ್ಯಾಯೋಚಿತ ನಿರ್ಣಯ ನೀಡುವ ಮೂಲಕ ಯುವ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು’ ಎಂದರು.

‌ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ವಿ.ನಡವಿನಮನಿ, ಬಸವರಾಜ ಬಳ್ಳಾರಿ, ಇಂಗಳಳ್ಳಿ, ಕುಮಾರ ಪೂಜಾರ, ರಿಯಾಜ್‌ ಅಹ್ಮದ್ ಇದ್ದರು.

ಗ್ರಾಮೀಣ ಕ್ರೀಡಾಪಟುಗಳಿಗಾಗಿ ಕಬಡ್ಡಿ, ಕೊಕ್ಕೊ, ಕುಸ್ತಿ, ಚಕ್ಕಡಿ ಓಟ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು.

ಎಂ.ಎಸ್.ಕುಚಬಾಳ ನಿರೂಪಣೆ ಮಾಡಿದರು. ಬಿ.ವಿ.ನಡವಿನಮನಿ ಸ್ವಾಗತಿಸಿದರು. ಕುಮಾರ ಪೂಜಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.