ADVERTISEMENT

ಗಜೇಂದ್ರಗಡ: ರೈತರಿಗೆ ಸಿಗದ ತುಂತುರು ನೀರಾವರಿ ಉಪಕರಣ

ಕೃಷಿ ಇಲಾಖೆಯಿಂದ ಕಳೆದೊಂದು ವರ್ಷದಿಂದ ಪೂರೈಕೆಯಾಗದೇ ರೈತರ ಪರದಾಟ

ಶ್ರೀಶೈಲ ಎಂ.ಕುಂಬಾರ
Published 6 ಫೆಬ್ರುವರಿ 2023, 6:21 IST
Last Updated 6 ಫೆಬ್ರುವರಿ 2023, 6:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗಜೇಂದ್ರಗಡ: ಕೃಷಿಕರಿಗೆ ನೀರು ಅತ್ಯಗತ್ಯ ಸಂಪನ್ಮೂಲಗಳಲ್ಲಿ ಒಂದಾಗಿದ್ದು, ಸರ್ಕಾರ ಹನಿ ನೀರಿನಿಂದ ಅಧಿಕ ಬೆಳೆ ಎಂಬ ಧ್ಯೇಯದೊಂದಿಗೆ ರೈತರಿಗೆ ಸಬ್ಸಿಡಿ ದರದಲ್ಲಿ ತುಂತುರು ನೀರಾವರಿ (ಸ್ಪಿಂಕ್ಲರ್) ಉಪಕರಣಗಳನ್ನು ವಿತರಿಸುತ್ತಿದೆ. ಆದರೆ ತಾಲ್ಲೂಕಿನಲ್ಲಿ ಕಳೆದ ಒಂದು ವರ್ಷದಿಂದ ರೈತರಿಗೆ ತುಂತುರು ನೀರಾವರಿ ಉಪಕರಣಗಳು ಸಿಗುತ್ತಿಲ್ಲ. ಹೀಗಾಗಿ ರೈತರನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ.

ಮಾರುಕಟ್ಟೆಯಲ್ಲಿ ಸ್ಪಿಂಕ್ಲರ್ ಸೆಟ್ ಗೆ ₹ 22 ರಿಂದ ₹ 25 ಸಾವಿರ ದರವಿದೆ. ಹೀಗಾಗಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ 2015 -16 ರಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮೂಲಕ ರೈತರಿಗೆ ಶೇ.90 ರಷ್ಟು ಸಬ್ಸಿಡಿಯೊಂದಿಗೆ ತುಂತುರು ನೀರಾವರಿ ಉಪಕರಣಗಳನ್ನು ವಿತರಿಸುತ್ತಿದೆ.

ಗಜೇಂದ್ರಗಡ ಭಾಗದಲ್ಲಿ ಕೆಂಪು (ಮಸಾರಿ) ಮಣ್ಣು ಹೊಂದಿರುವ ಪ್ರದೇಶದಲ್ಲಿ ರೈತರು ನೀರಾವರಿ ಕೃಷಿ ಮಾಡುತ್ತಿದ್ದಾರೆ. ರೋಣ-ಗಜೇಂದ್ರಗಡ ತಾಲ್ಲೂಕಿನಲ್ಲಿ ಪ್ರತಿ ವರ್ಷ 1000-1200 ರೈತರು ಸ್ಪಿಂಕ್ಲರ್ ಸೆಟ್ ಗಾಗಿ ಅರ್ಜಿ ಸಲ್ಲಿಸುತ್ತಾರೆ. ಅದರಲ್ಲಿ ಅತಿ ಹೆಚ್ಚು ಗಜೇಂದ್ರಗಡ ತಾಲ್ಲೂಕಿನ ರೈತರು ಅರ್ಜಿ ಸಲ್ಲಿಸಿರುತ್ತಾರೆ. ಆದರೆ ತಾಲ್ಲೂಕಿನ ರೈತರಿಗೆ ಕಳೆದ ವರ್ಷದಿಂದ ಸ್ಪಿಂಕ್ಲರ್ ಸಿಗುತ್ತಿಲ್ಲ.

ADVERTISEMENT

'ಈ ಹಿಂದೆ 2.5 ಇಂಚಿನ ಸ್ಪಿಂಕ್ಲರ್ ಸೆಟ್ ಗೆ ₹ 2070 ರೂ. ಹಾಗೂ 2 ಇಂಚಿನ ಸ್ಪಿಂಕ್ಲರ್ ಸೆಟ್ ಗೆ ₹ 1932 ರೈತರ ವಂತಿಕೆ ಸರ್ಕಾರದಿಂದ ಶೇ.90 ರಷ್ಟು ಸಬ್ಸಿಡಿ ಪೂರೈಕೆದಾರರಿಗೆ ಸಿಗುತ್ತಿತ್ತು. ಆದರೆ ಈಗ ಸರ್ಕಾರ 2.5 ಇಂಚಿನ ಸ್ಪಿಂಕ್ಲರ್ ಸೆಟ್ ಗೆ ₹ 1876 ಹಾಗೂ 2 ಇಂಚಿನ ಸ್ಪಿಂಕ್ಲರ್ ಸೆಟ್ ಗೆ ₹ 1734 ರೈತರ ವಂತಿಕೆ ನಿಗದಿ ಮಾಡಿದೆ. ಇದರಿಂದ ಸರ್ಕಾರದಿಂದ ಸಿಗುತ್ತಿದ್ದ ಸಬ್ಸಿಡಿಯೂ ಸಹ ಕಡಿಮೆಯಾಗಿದ್ದರಿಂದ ಪೂರೈಕೆದಾರರು ಉಪಕರಣಗಳನ್ನು ನೀಡಲು ಹಿಂದೆಟು ಹಾಕುತ್ತಿದ್ದಾರೆ' ಎಂಬ ಮಾತುಗಳು ಕೇಳಿ ಬರುತ್ತಿವೆ.

'ಸ್ಪಿಂಕ್ಲರ್ ಗಾಗಿ ಸಲ್ಲಿಸಿದ್ದ 800 ರೈತರ ಅರ್ಜಿಗಳು ಹಾಗೂ ಆರ್.ಟಿ.ಜಿ.ಎಸ್ ಮಾಡಿ ಆದೇಶ ಪ್ರತಿ ನೀಡಿದ 15 ರೈತರಿಗೆ ಸ್ಪಿಂಕ್ಲರ್ ಕೊಡುವುದು ಬಾಕಿ ಉಳಿದಿವೆ. ಸದ್ಯ 1 ಸಾವಿರ ರೈತರಿಗೆ ಸ್ಪಿಂಕ್ಲರ್ ನೀಡುವಷ್ಟು ಅನುದಾನ ಲಭ್ಯವಿದ್ದು, ಶೀಘ್ರದಲ್ಲಿಯೇ ಮತ್ತೆ ರೈತರಿಂದ ಅರ್ಜಿ ಆಹ್ವಾನಿಸಿ ವಿತರಿಸಲಾಗುವುದು' ಎಂದು ಸಹಾಯಕ ಕೃಷಿ ನಿರ್ದೇಶಕ ರವಿಂದ್ರಗೌಡ ಪಾಟೀಲ ಹೇಳಿದರು.

2 ವರ್ಷಗಳಿಂದ ಸ್ಪ್ರೇಯರ್ ಪೂರೈಕೆ ಬಂದ್

ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿ ದರದಲ್ಲಿ ರೈತರಿಗೆ ವಿತರಿಸುತ್ತಿದ್ದ ಸ್ಪ್ರೇಯರ್ ಗಳನ್ನು ಕಳೆದ ಎರಡು ವರ್ಷಗಳಿಂದ ವಿತರಿಸಿಲ್ಲ. ಅಧಿಕಾರಿಗಳು ಕೇಳಿದರೆ ಅದಕ್ಕೆ ಅನುದಾನ ಬಂದಿಲ್ಲ.ಹೀಗಾಗಿ ಸ್ಪ್ರೇಯರ್ ವಿತರಿಸಿಲ್ಲ ಎನ್ನುತ್ತಾರೆ.

ಅಲ್ಲದೆ ಗಜೇಂದ್ರಗಡ ತಾಲ್ಲೂಕಿನಲ್ಲಿ ಮಸಾರಿ ಭೂಮಿ ಹೊಂದಿರುವ ರೈತರು ಬೇಸಿಗೆ ಪೂರ್ವದಲ್ಲಿ ಹೆಚ್ಚು ಶೇಂಗಾ ಬಿತ್ತನೆ ಮಾಡುತ್ತಾರೆ. ಶೇಂಗಾ ಬೆಳೆಗೆ ಪೂರಕವಾಗುವ ಜಿಪ್ಸಂ ರೈತ ಸಂಪರ್ಕ ಕೇಂದ್ರದಲ್ಲಿ ಸಕಾಲದಲ್ಲಿ, ಅಗತ್ಯಕ್ಕೆ ಅನುಗುಣವಾಗಿ ಸಿಗುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.

ರೈತರ ಕಲ್ಯಾಣಕ್ಕಾಗಿ ಇರುವ ಕೃಷಿ ಇಲಾಖೆಯಲ್ಲಿ ರೈತರಿಗೆ ಬೇಕಾದ ಉಪಕರಣಗಳು, ಬೀಜ, ಗೊಬ್ಬರ ಸಕಾಲದಲ್ಲಿ, ಅಗತ್ಯಕ್ಕೆ ಅನುಗುಣವಾಗಿ ವಿತರಿಸಲು ಆಗುತ್ತಿಲ್ಲ ಎಂದರೆ ಇಲಾಖೆ ಯಾರ ಕಲ್ಯಾಣ ಮಾಡುತ್ತಿದೆ ಎಂಬುದು ತಿಳಿಯುತ್ತಿಲ್ಲ
ವಿಜಯಕುಮಾರ ಜಾಧವ, ಯುವ ರೈತ, ರಾಮಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.