ADVERTISEMENT

ಕಾಲ್ತುಳಿತ ಪ್ರಕರಣ: ಸಿಎಂ,ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 16:07 IST
Last Updated 16 ಜೂನ್ 2025, 16:07 IST
ಗಜೇಂದ್ರಗಡ ಕಾಲಕಾಲೇಶ್ವರ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು
ಗಜೇಂದ್ರಗಡ ಕಾಲಕಾಲೇಶ್ವರ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು   

ಗಜೇಂದ್ರಗಡ: ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ಸಂಭ್ರಮಾಚರಣೆಯಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷದಿಂದಾಗಿ ನಡೆದ ಕಾಲ್ತುಳಿತದಿಂದ 11  ಅಭಿಮಾನಿಗಳು ಮೃತಪಟ್ಟಿದ್ದು, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ  ಅವರು ತಕ್ಷಣವೇ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದಲ್ಲಿರುವ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಗೃಹ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕಾಲಕಾಲೇಶ್ವರ ವೃತ್ತ ತಲುಪಿತು. ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಉಮೇಶ ಮಲ್ಲಾಪುರ ಮಾತನಾಡಿ, ‘ಅನುಮತಿ ಪಡೆಯದೇ ಸಂಭ್ರಮಾಚರಣೆಗೆ ನಡೆಸಿದ್ದರಿಂದ 11 ಅಮಾಯಕ ಆರ್.ಸಿ.ಬಿ ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಕಾಂಗ್ರೆಸ್‌ ಸರ್ಕಾರದ ನಿರ್ಲಕ್ಷ್ಯವೇ ಘಟನೆಗೆ ಕಾರಣ. ಈ ಪ್ರಕರಣದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಆರ್.ಕೆ.ಚವ್ಹಾಣ ಮಾತನಾಡಿ, ‘ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ಮಾಡಿದರೆ ತಮಗೆ ಮತ ಸಿಗಬಹುದೆಂಬ ದುರಾಲೋಚನೆಯಿಂದ ಕಾಂಗ್ರೆಸ್‌ ಸರ್ಕಾರವು ಕಾರ್ಯಕ್ರಮ ನಡೆಸಿತ್ತು’ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ, ಅಶೋಕ ನವಲಗುಂದ, ಶಿವಾನಂದ ಮಠದ, ಕರಣ ಬಂಡಿ, ಭಾಸ್ಕರಸಾ ರಾಯಬಾಗಿ, ರಮೇಶ ವಕ್ಕರ, ಮಹಾಂತೇಶ ಸೋಮನಕಟ್ಟಿ, ಬುಡ್ಡಪ್ಪ ಮೂಲಿಮನಿ, ಕರಣ ಬಂಡಿ, ಮಹಾಂತೇಶ ಪೂಜಾರ, ಡಿ.ಜಿ. ಕಟ್ಟಿಮನಿ, ಶಿವಕುಮಾರ ಜಾಧವ್, ಮುತ್ತಯ್ಯ ಬಾಳಿಕಾಯಿಮಠ, ಪಂಚಾಕ್ಷರಿ ಹರ್ಲಾಪುರಾಮಠ, ಅಂದಪ್ಪ ಅಂಗಡಿ, ಮಲ್ಲು ಕುರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.