ADVERTISEMENT

ಮೂರು ವರ್ಷದ ಮಗು ಮೃತಪಟ್ಟಿರುವ ಶಂಕೆ

ಮನನೊಂದು ಮಲಪ್ರಭಾ ನದಿಗೆ ಹಾರಿದ ಮಹಿಳೆ ಜೀವಂತ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 3:43 IST
Last Updated 30 ಸೆಪ್ಟೆಂಬರ್ 2021, 3:43 IST
ರೋಣ ತಾಲ್ಲೂಕಿನ ಹೊಳೆಆಲೂರ ಗ್ರಾಮದ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿ
ರೋಣ ತಾಲ್ಲೂಕಿನ ಹೊಳೆಆಲೂರ ಗ್ರಾಮದ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿ   

ಹೊಳೆಆಲೂರ: ಮೂರು ವರ್ಷದ ಮಗುವಿನೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ರೋಣ ತಾಲ್ಲೂಕಿನ ಹೊಳೆಆಲೂರ ಗ್ರಾಮದ ಮಹಿಳೆ ನದಿಯಲ್ಲಿರುವ ಮುಳ್ಳು ಕಂಟಿಯಲ್ಲಿ ಜೀವಂತ ಪತ್ತೆಯಾಗಿದ್ದಾರೆ. ಆದರೆ ಮಗು ಅಸುನೀಗಿರುವ ಶಂಕೆಯಿದ್ದು, ಶೋಧ ಕಾರ್ಯಾಚರಣೆ ನಡೆದಿದೆ.

ಉಮಾದೇವಿ ಸಂಗಮೇಶ ಶೆಲ್ಲಿಕೇರಿ (50) ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದವರು. ಅವರಿಗೆ ನಾಲ್ವರು ಹೆಣ್ಣುಮಕ್ಕಳಿದ್ದು ಒಬ್ಬಳು ಪಿಯುಸಿ ಓದುತ್ತಿದ್ದಾಳೆ.

‘ಊರಿಗೆ ಹೋಗೋಣ’ ಎಂದು ಬುಧವಾರ ಬೆಳಿಗ್ಗೆ ಮನೆಯಲ್ಲಿದ್ದ ಮೂವರು ಹೆಣ್ಣು ಮಕ್ಕಳೊಂದಿಗೆ ಬಾದಾಮಿ ರಸ್ತೆ ಮಾರ್ಗದಲ್ಲಿ ಹರಿಯುವ ಮಲಪ್ರಭಾ ನದಿಯ ಸೇತುವೆಗೆ ಬಂದಿದ್ದ ಅವರು, ಆರಂಭದಲ್ಲಿ 3 ವರ್ಷದ ಮಗು ಶ್ರೇಯಾಳನ್ನು ನೀರಿಗೆ ಎಸೆದಿದ್ದಾರೆ. ಇದನ್ನು ಕಂಡು ಉಳಿದ ಇಬ್ಬರು ಹೆಣ್ಣು ಮಕ್ಕಳು ತಾಯಿಯ ಕೈ ಕಚ್ಚಿ, ಕೊಸರಿಕೊಂಡು ಅರಚುತ್ತಾ ಓಡಿ ಹೋಗಿದ್ದಾರೆ. ನಂತರ ಮಹಿಳೆ ಸೇತುವೆ ಬಳಿ ತನ್ನ ಸೀರೆ ಬಿಟ್ಟು ನದಿಗೆ ಹಾರಿದರು ಎಂದು ತಾಯಿಯಿಂದ ತಪ್ಪಿಸಿಕೊಂಡು ಬಂದ ಮಕ್ಕಳು ಮಾಹಿತಿ ನೀಡಿದ್ದಾರೆ.

ADVERTISEMENT

‘ಗದಗ- ರೋಣ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್‌ನಲ್ಲಿ ಅಲ್ಲಿಗೆ ತೆರಳಿದಾಗ ಮಹಿಳೆ ಜೀವಂತ ಇದ್ದರು. ನಂತರ ಮಹಿಳೆಯನ್ನು ರಕ್ಷಣೆ ಮಾಡಿ ರೋಣ ತಾಲ್ಲೂಕು ಆಸ್ಪತ್ರೆಗೆ ಕಳುಹಿಸಲಾಗಿದೆ. ಮಹಿಳೆಯು ಆರೋಗ್ಯವಾಗಿದ್ದಾಳೆ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿನವೀನ್ ಎಸ್. ಕಗ್ಗಲಗೌಡ್ರ ಮಾಹಿತಿ ನೀಡಿದರು.

ಮಹಿಳೆಯ ಗಂಡ ಅನುದಾನಿತ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ, 6 ತಿಂಗಳ ಹಿಂದೆ ಕೋವಿಡ್‌ನಿಂದ ಮೃತಪಟ್ಟಿದ್ದರು. ಮಹಿಳೆ ಈಚೆಗೆ ಮನೆ ಕಟ್ಟಿಸುವ ಕಾರ್ಯದಲ್ಲಿ ತೊಡಗಿದ್ದರು. ಗಂಡನ ನೌಕರಿ, ಮನೆ ಕಟ್ಟಿಸುವುದು ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಾಲಬಾಧೆಯಿಂದ ಮಹಿಳೆ ಮನನೊಂದು ಆತ್ಮಹತ್ಯೆ ನಿರ್ಧಾರ ಕೈಗೊಂಡಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಬುಧವಾರ ರಾತ್ರಿವರೆಗೆ ಕಾರ್ಯಾಚರಣೆ ನಡೆಸಿದರೂ ಮಗುವಿನ ದೇಹ ಸಿಕ್ಕಿಲ್ಲ. ಆದ ಕಾರಣ ಗುರುವಾರವೂ ಶೋಧ ಕಾರ್ಯ ಮುಂದುವರಿಸಲಾಗುವುದು‌

ನವೀನ ಎಸ್. ಕಗ್ಗಲಗೌಡ್ರ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.