ಗದಗ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ಬಡ, ಮಧ್ಯಮ ವರ್ಗ ಸೇರಿದಂತೆ ಸಮಾಜದ ಎಲ್ಲಾ ವರ್ಗಗಳಿಗೂ ಪೂರಕವಾಗಿದೆ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದ್ದಾರೆ.
ಮೀನುಗಾರ ವಲಯಕ್ಕೆ ₹60 ಸಾವಿರ ಕೋಟಿ, ಎಸ್‌ಸಿ, ಎಸ್‌ಟಿ ಉದ್ಯಮ ಸ್ಥಾಪನೆಗೆ ₹2 ಕೋಟಿವರೆಗೂ ಸಾಲಕ್ಕೆ ವ್ಯವಸ್ಥೆ, ಸಣ್ಣ ಕೈಗಾರಿಕೆಗಳ ಬೆಳವಣಿಗೆಳ ಉತ್ತೇಜನಕ್ಕೆ ವಿಶೇಷ ಆದ್ಯತೆ, ಗರ್ಭಣಿಯರು ಸೇರಿದಂತೆ ನವಜಾತ ಶಿಶು, ಹಾಲುಣಿಸುವ ತಾಯಿಂದಿರಿಗೆ ಪೌಷ್ಟಿಕ ಆಹಾರ ವಿತರಣೆ, ಸರ್ಕಾರಿ ಪ್ರೌಢಶಾಲೆಗಳಿಗೆ ಇಂಟರನೆಟ್ ಸೌಲಭ್ಯ, ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಕ್ಯಾನ್ಸರ್ ಸೆಂಟರ್ ಪ್ರಾರಂಭ, ಬೀದಿಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯ, ನಗರಾಭಿವೃದ್ಧಿಗೆ ವಿಶೇಷ ಅನುದಾನ, ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್, ಕೈಗಾರಿಕೆಗಳ ಅಭಿವೃದ್ಧಿಗೆ ಮತ್ತು ಹೊಸ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಗಮನ, ತೆರಿಗೆ ಪದ್ಧತಿಯಲ್ಲಿ ಸಾಕಷ್ಟು ಸರಳೀಕರಣ ಮಾಡಿರುವುದು, ₹12 ಲಕ್ಷದವರೆಗೆ ಆದಾಯಕ್ಕೆ ತೆರಿಗೆ ವಿನಾಯ್ತಿ ನೀಡಿರುವುದು ಸೇರಿದಂತೆ ಸಮೃದ್ಧ ಭಾರತ ನಿರ್ಮಾಣಕ್ಕೆ ವಿಶೇಷ ಆದ್ಯತೆ ಬಜೆಟ್ ಇದಾಗಿದೆ’ ಎಂದು ತಿಳಿಸಿದ್ದಾರೆ.
ಗದಗ: ಕೃಷಿಕರು, ಮಹಿಳೆಯರು, ಯುವಕರು, ಬಡವರ ಕಲ್ಯಾಣಕ್ಕಾಗಿ ಹಾಗೂ ವಿಕಸಿತ ಭಾರತ ನಿರ್ಮಾಣಕ್ಕಾಗಿ ಸಿದ್ಧಪಡಿಸಿದ ಬಜೆಟ್ ಅನ್ನು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದ್ದಾರೆ.
ಕೇಂದ್ರ ಮಂಡಿಸಿದ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಸಹಯೋಗದೊಂದಿಗೆ ನೂರು ಜಿಲ್ಲಾ ಕೇಂದ್ರಗಳಲ್ಲಿ ಹೊಸದಾಗಿ ಪ್ರಧಾನಮಂತ್ರಿ ಧನ ಧಾನ್ಯ ಯೋಜನೆ ಪ್ರಾರಂಭಿಸುವುದಾಗಿ ಘೋಷಣೆ ಮಾಡಲಾಗಿದ್ದು ಇದರಿಂದ 1.7 ಕೋಟಿ ರೈತರಿಗೆ ಸಹಾಯವಾಗಲಿದೆ. ಆತ್ಮನಿರ್ಭರ ಯೋಜನೆ ಅಡಿ ದ್ವಿದಳ ಧಾನ್ಯ ಹಾಗೂ ಎಣ್ಣೆ ಕಾಳು, ತರಕಾರಿ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಗುರಿಯನ್ನು ಹೊಂದಲಾಗಿದೆ.
ರೈತರಿಗೆ ಯೂರಿಯಾ ಕೊರತೆ ಸರಿದೂಗಿಸಲು ಹೆಚ್ಚುವರಿಯಾಗಿ ಯೂರಿಯಾ ಉತ್ಪಾದನೆ ಕಾರ್ಖಾನೆಗಳನ್ನು ಸ್ಥಾಪಿಸಲು ಕೂಡ ನಿರ್ಣಯಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ ನೀಡುವ ಸಾಲವನ್ನು ಮೂರರಿಂದ ಐದು ಲಕ್ಷದವರೆಗೆ ಹೆಚ್ಚಿಸಲಾಗಿದೆ.
ತಾಂತ್ರಿಕ ಶಿಕ್ಷಣ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆಗೆ ಹೆಚ್ಚು ಮಹತ್ವ ನೀಡಲಾಗಿದೆ. ದೇಶದಲ್ಲಿರುವ 23 ಐಐಟಿಗಳಲ್ಲಿ ಸದ್ಯ ಇರುವ 65,000 ಸೀಟುಗಳನ್ನು 1.3 ಲಕ್ಷಕ್ಕೆ ಏರಿಸಲಾಗಿದೆ. ಅದೇರೀತಿ ಎಂಬಿಬಿಎಸ್ ಸೀಟ್‌ಗಳನ್ನು 10,000ಕ್ಕೆ ಹಾಗೂ ಪಿಜಿ ಸೀಟುಗಳನ್ನು 75,000 ಕ್ಕೆ ಹೆಚ್ಚಿಸುವ ನಿರ್ಧಾರವನ್ನು ಕೈಗೊಂಡಿರುವುದು ಅತ್ಯಂತ ಶ್ಲಾಘನೀಯ ಸಂಗತಿ.
36 ಜೀವ ಉಳಿಸುವ ಡ್ರಗ್ಸ್‌ಗಳಿಗೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ ಇದರಿಂದ ಬಡವರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.