ಲಕ್ಷ್ಮೇಶ್ವರ: ಯೂರಿಯಾ ಗೊಬ್ಬರಕ್ಕೆ ತಾಲ್ಲೂಕಿನಲ್ಲಿ ಬೇಡಿಕೆ ಹೆಚ್ಚಾಗಿದ್ದು ರೈತರು ಗೊಬ್ಬರ ಖರೀದಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಗುರುವಾರ ರಾತ್ರಿ ಗ್ರಾಮೀಣ ಪ್ರದೇಶಗಳ 10-15 ರೈತರು ಲಕ್ಷ್ಮೇಶ್ವರದ ಗೊಬ್ಬರ ಅಂಗಡಿಯೊಂದರ ಎದುರೇ ಟ್ರ್ಯಾಕ್ಟರ್ ನಿಲ್ಲಿಸಿ ಅಲ್ಲಿಯೇ ಮಲಗಿಕೊಂಡ ಘಟನೆ ಜರುಗಿದೆ.
ಹೌದು. ಯೂರಿಯಾ ಗೊಬ್ಬರಕ್ಕಾಗಿ ಪ್ರತಿದಿನ ರೈತರು ಸರದಿ ಸಾಲಲ್ಲಿ ನಿಲ್ಲುವ ಸ್ಥಿತಿ ಇದ್ದು ಬೆಳಿಗ್ಗೆ ಗದ್ದಲ ಆಗುತ್ತದೆ ಎಂದು ರೈತರು ರಾತ್ರಿಯೇ ಅಂಗಡಿ ಎದುರು ಟ್ರ್ಯಾಕ್ಟರ್ ನಿಲ್ಲಿಸಿ ಅದರಲ್ಲಿಯೇ ಪ್ಲಾಸ್ಟಿಕ್ ತಾಡಪತ್ರಿಗಳನ್ನು ಹೊದ್ದುಕೊಂಡು ಜಿಟಿಜಿಟಿ ಮಳೆಯಲ್ಲಿಯೇ ಮಲಗಿ ನಸುಕಿನ ಜಾವ ಸರದಿ ಹಚ್ಚಿ ನಿಂತ ಗೊಬ್ಬರ ತೆಗೆದುಕೊಂಡು ಹೋದರು.
ತಾಲ್ಲೂಕಿನ ಚನ್ನಪಟ್ಟಣ, ಮುನಿಯನತಾಂಡಾ ಹಾಗೂ ಸ್ಥಳೀಯ ರೈತರು ಟ್ರ್ಯಾಕ್ಟರ್ನ್ನು ಗೊಬ್ಬರ ಅಂಗಡಿ ಮುಂದೆ ನಿಲ್ಲಿಸಿದ್ದರು. ಒಬ್ಬ ರೈತರಿಗೆ ಎರಡು ಚೀಲ ಮಾತ್ರ ಗೊಬ್ಬರ ವಿತರಿಸಲಾಗುತ್ತಿದೆ. ಆದರೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಇದು ತಾಲ್ಲೂಕಿನಲ್ಲಿ ಯೂರಿಯಾ ಗೊಬ್ಬರದ ಕೊರತೆಯನ್ನು ತೋರಿಸುತ್ತಿದೆ.
’ನಿರಂತರ ಮಳೆಯಿಂದ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದು ರೈತರಿಗೆ ಬೇಕಾಗುವಷ್ಟು ಗೊಬ್ಬರ ಕೊಡಬೇಕು’ ಎಂದು ಲಕ್ಷ್ಮೇಶ್ವರದ ರೈತ ಮುಖಂಡ ನಾಗರಾಜ ಚಿಂಚಲಿ ಆಗ್ರಹಿಸಿದರಲ್ಲದೆ ‘ಕೆಲ ಅಂಗಡಿಯವರು ಗೊಬ್ಬರ ಇದ್ದರೂ ಕೊಡದೆ ರೈತರನ್ನು ಸತಾಯಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಏಕಾಏಕಿ 25-30 ರೈತರು ಅಂಗಡಿಯೊಳಕ್ಕೆ ನುಗ್ಗುತ್ತಾರೆ. ಪರಿಸ್ಥಿತಿ ಹೀಗಿರುವಾಗ ರೈತರಿಗೆ ಗೊಬ್ಬರ ಕೊಡುವುದು ಸಮಸ್ಯೆ ಆಗುತ್ತದೆ. ಸರದಿ ಸಾಲಲ್ಲಿ ಬಂದರೆ ಎಲ್ಲರಿಗೂ ಸಿಗುತ್ತದೆ. ಈ ಕಾರಣಕ್ಕಾಗಿ ಪೊಲೀಸರ ಸುಪರ್ದಿಯಲ್ಲಿ ಗೊಬ್ಬರ ಕೊಡಲು ನಿರ್ಧರಿಸಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಗೊಬ್ಬರ ಅಂಗಡಿ ಮಾಲೀಕರೊಬ್ಬರು ತಿಳಿಸಿದರು. ಸಧ್ಯ ತಾಲ್ಲೂಕಿನಾದ್ಯಂತ ಮಳೆ ಆಗುತ್ತಿದ್ದು ಮುಂದಿನ ದಿನಗಳಲ್ಲಿ ಯೂರಿಯಾ ಗೊಬ್ಬರಕ್ಕೆ ಮತ್ತಷ್ಟು ಬೇಡಿಕೆ ಬರುವ ನಿರೀಕ್ಷೆ ಇದ್ದು ಅಧಿಕಾರಿಗಳು ಹೆಚ್ಚಿನ ಗೊಬ್ಬರ ತರಿಸಬೇಕಾದ ಅಗತ್ಯ ಇದೆ.
ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ರೈತರು ಶುಕ್ರವಾರವೂ ಯೂರಿಯಾ ಗೊಬ್ಬರ ಸಿಗದೇ ರೈತರು ಪರದಾಡಿದ್ದು ಕಂಡು ಬಂತು. ಬೆಳಗಿನ ಜಾವವೇ ಖಾಸಗಿ ಗೊಬ್ಬರಗಳ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಯೂರಿಯಾ ಪಡೆಯಲು ತೀವ್ರ ಹರಸಾಹಸಪಟ್ಟರು.
ಆದರೆ ಶುಕ್ರವಾರ ಕೇವಲ 50 ಮೆಟ್ರಿಕ್ ಟನ್ ಮಾತ್ರ ಬಂದಿದ್ದರಿಂದ ಕೇವಲ ಬೆರಳೆಣಿಕೆ ರೈತರರಿಗೆ ಮಾತ್ರ ಸಿಕ್ಕಿತು. ಇದರಿಂದ ಹೆಚ್ಚಿನ ರೈತರು ತಾಲ್ಲೂಕು ಆಡಳಿತ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಗ್ರಾಮಗಳ ರೈತರು ಮಾತನಾಡಿ, ಈ ವರ್ಷ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ವಾಣಿಜ್ಯ ಬೆಳೆಗಳಾದ ಗೋವಿನಜೋಳ, ಬಿ.ಟಿ.ಹತ್ತಿ, ಈರುಳ್ಳಿ ಸೇರಿದಂತೆ ಮುಂತಾದ ಬೆಳೆಗಳಿಗೆ ಸಮರ್ಪಕ ಯೂರಿಯಾ ಅಗತ್ಯವಿದೆ. ಅದನ್ನು ಪೃರೈಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಕೂಡ ಪ್ರಯೋಜನ ಆಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹಲವು ದಿನಗಳಿಂದ ತಾಲ್ಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಬಿತ್ತನೆ ಮಾಡಿದ ಬೆಳೆಗಳು ಮಳೆ ತೇವಾಂಶ ಹೆಚ್ಚಾಗಿ ಹಳದಿ, ಕೆಂಪು ಬಣ್ಣಗಳಗೆ ತಿರುಗಿ ಬೆಳೆಗಳು ಹಾನಿಯಾಗುತ್ತಿವೆ.
ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿಗಳು ಎರಡು ದಿನದಲ್ಲಿ ಹೆಚ್ಚಿನ ಗೊಬ್ಬರ ಪೂರೈಕೆ ಮಾಡದಿದ್ದರೆ ಪಟ್ಟಣದ ಕೃಷಿ ಇಲಾಖೆಗೆ ಕೀಲಿ ಹಾಕಿ ಹುಬ್ಬಳ್ಳಿ -ಸೋಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತರು ಶುಕ್ರವಾರ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.