ADVERTISEMENT

ಮತದಾನ ಪ್ರಮಾಣ ಶೇ 2.44 ಹೆಚ್ಚಳ

ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಶೇ 4.28ರಷ್ಟು ಇಳಿಕೆ

ಜೋಮನ್ ವರ್ಗಿಸ್
Published 24 ಏಪ್ರಿಲ್ 2019, 20:30 IST
Last Updated 24 ಏಪ್ರಿಲ್ 2019, 20:30 IST
ಮೊದಲ ಬಾರಿ ಮತದಾನ ಮಾಡಲು ಮಂಗಳವಾರ ಗದುಗಿನ ನಗರಸಭೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಬಳಿ ಕಾದು ನಿಂತಿದ್ದ ಯುವತಿ – ಸಾಂದರ್ಭಿಕ ಚಿತ್ರ
ಮೊದಲ ಬಾರಿ ಮತದಾನ ಮಾಡಲು ಮಂಗಳವಾರ ಗದುಗಿನ ನಗರಸಭೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಬಳಿ ಕಾದು ನಿಂತಿದ್ದ ಯುವತಿ – ಸಾಂದರ್ಭಿಕ ಚಿತ್ರ   

ಗದಗ: 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಶೇ 2.44ರಷ್ಟು ಹೆಚ್ಚಿದ್ದು ಶೇ 70.53ರಷ್ಟು ಮತದಾನ ದಾಖಲಾಗಿದೆ. 2014ರಲ್ಲಿ ಜಿಲ್ಲೆಯಲ್ಲಿ 68.09ರಷ್ಟು ಮತದಾನವಾಗಿತ್ತು.

ಮತದಾನದ ಪ್ರಮಾಣ ಗಣನೀಯವಾಗಿ ಹೆಚ್ಚಿಸುವ ಸಲುವಾಗಿ ಜಿಲ್ಲಾ ಸ್ವೀಪ್ ಸಮಿತಿ ಈ ಬಾರಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಚುನಾವಣಾ ಆಯೋಗದ ಕಾರ್ಯಕ್ರಮ ಮಾತ್ರವಲ್ಲದೆ, ಹಲವು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ಗ್ರಾಮೀಣ ಪ್ರದೇಶದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಿತ್ತು. ಇವು ಸಮಾಧಾನಕರ ಮಟ್ಟದಲ್ಲಿ ಫಲ ನೀಡಿದ್ದು, ಮತದಾನದ ಪ್ರಮಾಣ ತುಸು ಏರಿಕೆಯಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಅಂದರೆ ಶೇ 74.81ರಷ್ಟು ಮತದಾನ ಆಗಿತ್ತು. ಅದಕ್ಕೆ ಹೋಲಿಸಿದರೆ, ಈ ಬಾರಿ ಶೇ 4.28ರಷ್ಟು ಕಡಿಮೆ ಮತದಾನವಾಗಿದೆ. ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜಿಲ್ಲೆಯ ಗದಗ ಮತಕ್ಷೇತ್ರದಲ್ಲೇ ಈ ಬಾರಿ ಗರಿಷ್ಠ ಅಂದರೆ ಶೇ 72.41ರಷ್ಟು ಮತದಾನ ಆಗಿದೆ. ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಶೇ 69.87, ರೋಣ ಕ್ಷೇತ್ರದಲ್ಲಿ ಶೇ 69.49 ಹಾಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಶೇ70.33ರಷ್ಟು ಮತದಾನವಾಗಿದೆ.

ADVERTISEMENT

ಮಹಿಳಾ ಮತದಾರರ ನಿರಾಸಕ್ತಿ: ಜಿಲ್ಲೆಯ ಒಟ್ಟು 4,30,194 ಪುರುಷ ಮತದಾರರ ಪೈಕಿ 3,11,998 (ಶೇ72.51) ಹಾಗೂ 4,23,890 ಮಹಿಳಾ ಮತದಾರರ ಪೈಕಿ 2,90,361 (ಶೇ 68.51) ಮತದಾರರು ಮತದಾನ ಮಾಡಿದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳಾ ಮತದಾರರ ಶೇಕಡಾವಾರು ಮತದಾನ ಪ್ರಮಾಣ ಶೇ 4ರಷ್ಟು ಕಡಿಮೆ ಇದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ರಾಜ್ಯದ ಸರಾಸರಿಗಿಂತಲೂ ಶೇ 2.9ರಷ್ಟು ಹೆಚ್ಚಿನ ಮತದಾನ ಆಗಿತ್ತು. ಈ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಸರಾಸರಿಗಿಂತಲೂ (ಶೇ 68.61) ಶೇ 1.92ರಷ್ಟು ಹೆಚ್ಚಿನ ಮತದಾನ ಆಗಿದೆ.

ಗದಗ ಜಿಲ್ಲೆ ಅಂತಿಮ ಮತದಾನ ಪ್ರಮಾಣ

ಕ್ಷೇತ್ರ; ಒಟ್ಟು ಮತದಾರರು; ಮತ ಚಲಾಯಿಸಿದವರು; ಶೇಕಡವಾರು

ಗದಗ; 2,20,658; 1,59,783; 72.41

ಶಿರಹಟ್ಟಿ; 2,14,467; 1,51,250; 69.87

ರೋಣ; 2,27,875; 1,58,346; 69.49

ನರಗುಂದ; 1,89,084; 1,32,981; 70.33

ಒಟ್ಟು; 8,52,084; 6,02,360; 70.53

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.