ADVERTISEMENT

7,500 ಮಂದಿಯಿಂದ ಯೋಗಾಸನ

ಗದುಗಿನ ಎಎಸ್‌ಎಸ್‌ ಕಾಲೇಜು ಆವರಣದಲ್ಲಿ ಯೋಗಥಾನ್‌

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 5:29 IST
Last Updated 16 ಜನವರಿ 2023, 5:29 IST
ಗದಗ ನಗರದ ಎಎಸ್‌ಎಸ್‌ ಕಾಲೇಜು ಆವರಣದಲ್ಲಿ ಭಾನುವಾರ ನಡೆದ ಗಿನ್ನೆಸ್‌ ದಾಖಲೆಗಾಗಿ ಯೋಗಥಾನ್‌ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಗದಗ ನಗರದ ಎಎಸ್‌ಎಸ್‌ ಕಾಲೇಜು ಆವರಣದಲ್ಲಿ ಭಾನುವಾರ ನಡೆದ ಗಿನ್ನೆಸ್‌ ದಾಖಲೆಗಾಗಿ ಯೋಗಥಾನ್‌ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು   

ಗದಗ: ಗಿನ್ನೆಸ್‌ ದಾಖಲೆಗಾಗಿ ಭಾನುವಾರ ನಡೆದ ಯೋಗಥಾನ್‌ನಲ್ಲಿ ಅಂದಾಜು 7,500 ಮಂದಿ ಭಾಗವಹಿಸಿದ್ದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ನಗರದ ಎಎಸ್‌ಎಸ್ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಆಯುಷ್‌, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಯೋಗ ಸಂಸ್ಥೆ ಸಹಯೋಗದಲ್ಲಿ ಗಿನ್ನೆಸ್ ದಾಖಲೆಗಾಗಿ ಹಮ್ಮಿಕೊಂಡ ಯೋಗಾಥಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌., ‘ದೈನಂದಿನ ಜೀವನದಲ್ಲಿ ಉತ್ತಮ ಆರೋಗ್ಯಕ್ಕಾಗಿ ಯೋಗ ಪೂರಕವಾಗಿದೆ. ಯೋಗಾಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಗಿನ್ನೆಸ್‌ ದಾಖಲೆ ನಿರ್ಮಾಣಕ್ಕೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದ’ ಎಂದು ಹೇಳಿದರು.

‘ಯೋಗ ಬಲ್ಲವರಿಗೆ ರೋಗವಿಲ್ಲ ಎಂಬಂತೆ, ಯೋಗದಿಂದ ರೋಗ ಮುಕ್ತರಾಗಬಹುದು. ಇದನ್ನು ಅರಿತ ಪಾಶ್ಚಿಮಾತ್ಯ ರಾಷ್ಟ್ರಗಳು ಇಂದು ಯೋಗ ಅಭ್ಯಾಸವನ್ನು ತಮ್ಮ ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳುತ್ತಿವೆ. ಯೋಗ ದೈಹಿಕ, ಮಾನಸಿಕ ಸಮತೋಲನದ ಜತೆಗೆ ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಯುವಕರು ತಮ್ಮ ನಿತ್ಯ ಜೀವನದಲ್ಲಿ ಯೋಗ ಮಾಡುವುದರಿಂದ ಸಾರ್ಥಕತೆಯ ಜೀವನ ಸಾಗಿಸಬಹುದು’ ಎಂದರು.

ADVERTISEMENT

ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಬಾಸಾಬ್ ನೇಮಗೌಡ, ಸಾರ್ವಜನಿಕರ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವಲಿಂಗಪ್ಪ ಜಿ.ಎಂ., ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಾಗೌಡರ ಸೇರಿದಂತೆ ಯೋಗಾಥಾನ್‌ನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಯೋಗಪಟುಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಲಡ್ಡು, ಕುಕ್ಕೀಸ್‌, ಬಾಳೆಹಣ್ಣು ವಿತರಣೆ

‘ಗಿನ್ನೆಸ್‌ ದಾಖಲೆಗಾಗಿ ಆಯೋಜಿಸಿದ್ದ ಯೋಗಥಾನ್‌ ಭಾನುವಾರ ವ್ಯವಸ್ಥಿತವಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಅಂದಾಜು 7,500 ಮಂದಿ ಭಾಗವಹಿಸಿದ್ದರು’ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ತಿಳಿಸಿದ್ದಾರೆ.

ಕ್ರೀಡಾ ಇಲಾಖೆ ವತಿಯಿಂದ 2,500 ಮಂದಿಗೆ ಟೀಶರ್ಟ್‌ ಹಂಚಲಾಯಿತು. ಆರು ಸಾವಿರ ಲಡ್ಡು, 40 ಸಾವಿರ ಕುಕ್ಕೀಸ್‌, ಬಾಳೆಹಣ್ಣು ವಿತರಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.