ADVERTISEMENT

ಅಂಚೆ ನೌಕರರ ಸಂಘಟಿತ ಹೋರಾಟ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 5:20 IST
Last Updated 16 ಜುಲೈ 2012, 5:20 IST

ರಾಮನಾಥಪುರ: ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸುವ ಅಂಚೆ ನೌಕರರು ಸಂವಿಧಾನಬದ್ಧವಾಗಿ ತಮಗೆ ಸಿಗಬೇಕಾದ ಸೌಲಭ್ಯಗಳಿಗಾಗಿ ಸಂಘಟಿತ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದು ರಾಷ್ಟ್ರಿಯ ಅಂಚೆ ನೌಕರರ ಒಕ್ಕೂಟದ ಸಹಾಯಕ ಮಹಾ ಕಾರ್ಯದರ್ಶಿ ಆರ್. ಸೀತಾಲಕ್ಷ್ಮಿ ನುಡಿದರು.

ಅಖಿಲ ಭಾರತ ಅಂಚೆ ನೌಕರರ ಸಂಘದ ಹಾಸನ ವಿಭಾಗ ವತಿಯಿಂದ ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಅರಕಲಗೂಡು ಮತ್ತು ಹೊಳೆನರಸೀಪುರ ತಾಲ್ಲೂಕು ಉಪ ವಿಭಾಗ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಅಂಚೆ ಇಲಾಖೆ ನೌಕರರಿಗೆ ಸಮಾನ ವೇತನ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ನವದೆಹಲಿಯ ಸಂಸತ್ ಭವನದ ಮುಂದೆ ಜುಲೈ 26 ಮತ್ತು 27ರಂದು ಧರಣಿ ಹಮ್ಮಿಕೊಳ್ಳಲಾಗುವುದು. ಇದರ ಒಂದು ಭಾಗವಾಗಿ ಈ ಸಮಾವೇಶವನ್ನು ಆಯೋಜಿಸಿ ನೌಕರರನ್ನು ಸಂಘಟಿಸಲಾಗುತ್ತಿದೆ ಎಂದರು.

ರೈಲ್ವೆ ಇಲಾಖೆ ಹೊರತುಪಡಿಸಿದರೆ ದೇಶದಾದ್ಯಂತ ದೊಡ್ಡ ಜಾಲ ವಿಸ್ತರಿಸಿಕೊಂಡಿರುವ ಅಂಚೆ ಇಲಾಖೆ ಮನುಷ್ಯ- ಮನುಷ್ಯರ ನಡುವೆ ಸಂಪರ್ಕ ಸಾಧನವಾಗಿ ಮಹತ್ವದ ಸೇವೆ ನೀಡುತ್ತಿದೆ. ಆದರೆ, ಆಂಗ್ಲರು ಜಾರಿಗೆ ತಂದ ಈ ವ್ಯವಸ್ಥೆಯೊಳಗೆ ಕಳೆದ 150 ವರ್ಷಗಳಿಂದ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಗ್ರಾಮೀಣ ಪ್ರದೇಶದ ಅಂಚೆ ಇಲಾಖೆ ನೌಕರರ ಸ್ಥಿತಿ ಇಂದಿಗೂ ಶೋಚನೀಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ನೀತಿಯಿಂದಾಗಿ ವೇತನ ತಾರತಮ್ಯ ಸೇರಿದಂತೆ ಹಲವು ಸೇವಾ ಸೌಲಭ್ಯಗಳಿಂದ ವಂಚಿತಗೊಂಡಿರುವ ಅಂಚೆ ಇಲಾಖೆ ನೌಕರರು ಬಹಳ ವರ್ಷಗಳಿಂದ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾ ಬಂದರೂ ಪ್ರಯೋಜನ ಕಾಣದಾಗಿದೆ ಎಂದು ಆಪಾದಿಸಿದರು.

ಕೇಂದ್ರ ಸರ್ಕಾರವು ಕಂಪ್ಯೂಟರ್, ಲ್ಯಾಪ್‌ಟಾಪ್ ಸೌಲಭ್ಯಗಳನ್ನು ಅಂಚೆ ಇಲಾಖೆ ನೌಕರರಿಗೂ ಒದಗಿಸಿದರೆ ಎಸ್.ಬಿ.ಐ.ಗೆ ಮಿಗಿಲಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಬಿ.ಪಿ.ಎಂ. ಗಂಗೂರು ಮಂಜಣ್ಣ, ಜಿ.ಡಿ.ಎಸ್. ದೊಡ್ಡಬೆಮ್ಮತ್ತಿ ಹರೀಶ್ ಅವರು ಜಂಟಿ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಅಂಚೆ ನೌಕರರ ಸಂಘದ ಹಾಸನ ವಿಭಾಗ ಕಾರ್ಯದರ್ಶಿ ತಾರಾನಾಥ್ ಮಾತನಾಡಿದರು.

ಅಖಿಲ ಭಾರತ ಅಂಚೆ ನೌಕರರ ಸಂಘದ ಹಾಸನ ವಿಭಾಗದ ಬ್ರಹ್ಮದೇವ್, ಸತ್ಯನ್, ಜಿ.ಡಿ.ಎಸ್. ಅಧ್ಯಕ್ಷ ಕುಮಾರ್, ಜಿ.ಡಿ.ಎಸ್. ಸಹಾಯಕ ಮಹಾ ಕಾರ್ಯದರ್ಶಿ ಬಿ.ಆರ್. ಜಗದೀಶ್, ಕರ್ನಾಟಕ ವಲಯ ಕಾರ್ಯದರ್ಶಿ ಕೆ.ಎಸ್. ಕಲ್ಪೇಶ್, ಮೈಸೂರು ವಲಯ ಸಂಘಟನಾ ಕಾರ್ಯದರ್ಶಿ ಸುರೇಶ್, ಉಪ ಖಜಾಂಚಿ ಡಿ. ರಮೇಶ್ ಹಾಗೂ ಹಾಸನ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.