ADVERTISEMENT

ಅತಿಥಿ ಉಪನ್ಯಾಸಕರಿಗೆ ಎಬಿವಿಪಿ ಬೆಂಬಲ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 9:45 IST
Last Updated 13 ಫೆಬ್ರುವರಿ 2011, 9:45 IST

ಹಾಸನ: ಗುರುವಾರದಿಂದ ಅತಿಥಿ ಉಪನ್ಯಾಸಕರು ಜಿಲ್ಲೆಯಾದ್ಯಂತ ಮುಷ್ಕರ ಆರಂಭಿಸಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸರ್ಕಾರ ಕೂಡಲೇ ಈ ಸಮಸ್ಯೆ ಪರಿಹರಿಸುವತ್ತ ಗಮನಹರಿಸಬೇಕು ಎಂದು ಒತ್ತಾಯಿಸಿ ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಉಪನ್ಯಾಸಕರ ಮುಷ್ಕರಕ್ಕೆ ಬೆಂಬಲ ಸೂಚಿಸಿದ ವಿದ್ಯಾರ್ಥಿಗಳು, ‘ವೇತನ ಹೆಚ್ಚಳ ಹಾಗೂ ಸಕಾಲದಲ್ಲಿ ವೇತನ ಪಾವತಿ ಮಾಡುವಂತೆ ಆಗ್ರಹಿಸಿ ಉಪನ್ಯಾಸಕರು ಮುಷ್ಕರ ನಡೆಸುತ್ತಿದ್ದು ಅವರ ಬೇಡಿಕೆಯನ್ನು ಈಡೇರಿಸಬೇಕು. ಉಪನ್ಯಾಸಕರಿಗೆ ನೀಡಬೇಕಾಗಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಇವರ ಮುಷ್ಕರದಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೂ ಪರಿಣಾಮ ಉಂಟಾಗುತ್ತಿದೆ’ ಎಂದರು.

ಇತ್ತ ವಿವಿಧ ಕಾಲೇಜುಗಳ ಉಪನ್ಯಾಕರೂ ಸಹ ತರಗತಿಗಳನ್ನು ಬಹಿಷ್ಕರಿಸಿ ಕಲಾ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿ ಹಾಗೂ ಉಪನ್ಯಾಸಕರ ಮುಷ್ಕರದ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಎಚ್. ಎಸ್. ಪ್ರಕಾಶ್ ಉಪನ್ಯಾಸಕರ ಜತೆ ಮಾತುಕತೆ ನಡೆಸಿದರು. ಮುಂದಿನ ಬಜೆಟ್ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಅವರು ಭರವಸೆ ನೀಡಿದರು.ಉಪನ್ಯಾಸಕರು ಶಾಸಕರಿಗೆ ತಮ್ಮ ಬೇಡಿಕೆಗಳ ಬಗ್ಗೆ ಮನವಿಪತ್ರವನ್ನು ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.