ADVERTISEMENT

ಅನುದಾನರಹಿತ ಶಿಕ್ಷಕರ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 8:20 IST
Last Updated 13 ಫೆಬ್ರುವರಿ 2012, 8:20 IST

ಮೈಸೂರು: ಅನುದಾನ ರಹಿತ ಶಿಕ್ಷಕರ ಬೇಡಿಕೆಗಳನ್ನು 15 ದಿನಗಳ ಒಳಗೆ ಸರ್ಕಾರ ಈಡೇರಿಸದಿದ್ದರೆ ಶಿಕ್ಷಣ ಸಚಿವ ಮತ್ತು ಮುಖ್ಯಮಂತ್ರಿ  ಮನೆ ಮುಂದೆ ಧರಣಿ ಕುಳಿತುಕೊಳ್ಳುವುದರ ಜೊತೆಗೆ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ ಎಚ್ಚರಿಕೆ ನೀಡಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅನುದಾನ ರಹಿತ ಶಿಕ್ಷಕರು 40 ದಿನಗಳು ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. ನಂತರ 20 ದಿನಗಳಿಂದ ಧಾರವಾಡದಲ್ಲಿ ಆಮರ ಣಾಂತ ಉಪವಾಸ ಸತ್ಯಾಗ್ರಹ ಮಾಡು ತ್ತಿದ್ದು, ಈಗಾಗಲೇ 20 ಶಿಕ್ಷಕರು ಅಸ್ವಸ್ಥರಾಗಿ, ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಇಷ್ಟೆಲ್ಲ ಆದರೂ ಶಿಕ್ಷಣ ಸಚಿವ ಕಾಗೇರಿ ಮತ್ತು ಶಿಕ್ಷಣ ಇಲಾಖೆ ಸ್ಪಂದಿಸದಿ ರುವುದು ದುರಂತ ಹಾಗೂ ಅಮಾನ ವೀಯ. ಇದು ಮಾನವ ಹಕ್ಕುಗಳ ಉಲ್ಲಂಘನೆ ಆಗಿರುವುದರಿಂದ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದರು.

1994-95ರವರೆಗೆ ಪ್ರಾರಂಭ ವಾದ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಒದಗಿಸಲು ಸರ್ಕಾರ 2008-09ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಿ ಆದೇಶ ಹೊರಡಿಸಿತ್ತು. ಸೆ.5, 2011ರ ಶಿಕ್ಷಕರ ದಿನಾಚರಣೆಯಂದು ಅನು ದಾನ ರಹಿತ ಶಿಕ್ಷಕರ ಮನವಿಗೆ ಸ್ಪಂದಿ ಸಿದ ಮುಖ್ಯಮಂತ್ರಿ ವಾರದಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು.
 
ಆದರೆ ಅವರೂ ಮಾತಿಗೆ ತಪ್ಪಿದ್ದಾರೆ. ಇದರಿಂದ 4 ವರ್ಷಗಳಿಂದ ಸರ್ಕಾರದ ಅನುದಾನವೂ ಇಲ್ಲದೆ, ಶಾಲೆಗಳ ಆಡಳಿತ ಮಂಡಳಿ ನೀಡುತ್ತಿದ್ದ ವೇತನವೂ ಇಲ್ಲದೆ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೂ. 50 ಕೋಟಿ ಅನುದಾನ ಬಿಡುಗಡೆ ಮಾಡಲು ಮೀನಾಮೇಷ ಮಾಡುತ್ತಿರುವ ಸರ್ಕಾ ರದ ಕ್ರಮ ಖಂಡನೀಯ ಎಂದರು.

15 ದಿನಗಳ ಒಳಗೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ, 16ನೇ ದಿನ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರ ಮನೆ ಮುಂದೆ, 17ನೇ ದಿನ ಶಿಕ್ಷಣ ಸಚಿವರ ಮನೆ ಮುಂದೆ, 18ನೇ ದಿನ ಪುತ್ತೂರಿನಲ್ಲಿರುವ ಮುಖ್ಯಮಂತ್ರಿ ಮನೆ ಮುಂದೆ ಹಾಗೂ 19ನೇ ದಿನ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರ ಮನೆ ಮುಂದೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಮೊರಾರ್ಜಿ ಶಾಲೆ ಶಿಕ್ಷಕರ ಸಮಸ್ಯೆ: ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ 10 ವರ್ಷಗಳಿಂದ ಅಲ್ಪ ವೇತನಕ್ಕೆ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಗಳಿಗೆ ಜೇಷ್ಠತೆ ನೀಡದೆ, ಸರ್ಕಾರ ಹೊರಗುತ್ತಿಗೆ ಮೂಲಕ ಹೊಸ ಶಿಕ್ಷಕರನ್ನು ನೇಮಕಾತಿ ಮಾಡಿರುವುದು ಅಕ್ಷಮ್ಯ ಅಪರಾಧ. ಇದರ ವಿರುದ್ಧ ಬೃಹತ್ ಹೋರಾಟ ರೂಪಿಸುವುದು ಅನಿವಾರ್ಯ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.