ADVERTISEMENT

ಅಬಕಾರಿ ಅಕ್ರಮ ತಡೆಗೆ ಕಠಿಣ ಕ್ರಮ

113 ಕಡೆ ದಾಳಿ, 55 ಪ್ರಕರಣ ದಾಖಲು: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 8:54 IST
Last Updated 7 ಏಪ್ರಿಲ್ 2018, 8:54 IST
ಹಾಸನದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳ ಸಭೆ ನಡೆಸಿದರು.
ಹಾಸನದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳ ಸಭೆ ನಡೆಸಿದರು.   


ಹಾಸನ: ನೀತಿ ಸಂಹಿತೆ ಜಾರಿಯಾದ ನಂತರ ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳ ಕಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.ಮಾದರಿ ನೀತಿ ಸಂಹಿತೆ ಜಾರಿ ತಂಡಗಳು ಹೆಚ್ಚಿನ ನಿಗಾ ವಹಿಸಿದ್ದು, ಎಲ್ಲೆಡೆ ತಪಾಸಣೆ ಚುರುಕುಗೊಳಿಸಲಾಗಿದೆ.ಅಬಕಾರಿ ಇಲಾಖೆ ವಿವಿಧ ದಾಳಿಗಳ ಮೂಲಕ ಸುಮಾರು 55 ಪ್ರಕರಣ ದಾಖಲಿಸಿದೆ.

ಪೊಲೀಸ್ ಇಲಾಖೆ ಮಾರ್ಚ್ 27ರಿಂದ ಏಪ್ರಿಲ್ 5ರ ವರೆಗೆ 113 ಕಡೆ ಪ್ರತ್ಯೇಕವಾಗಿ ದಾಳಿ ನಡೆಸಿ, 304 ಲೀಟರ್ ಮದ್ಯ ವಶಪಡಿಸಿಕೊಂಡಿದೆ. ಅಲ್ಲದೆ ಭದ್ರತಾ ಕಾಯ್ದೆ ಅಡಿಯಲ್ಲಿ 513 ಪ್ರಕರಣ ದಾಖಲಿಸಿದೆ.ಇದೇ ರೀತಿ ಪೊಲೀಸ್ ಇಲಾಖೆ ವತಿಯಿಂದ 7 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ.

ಅಕ್ರಮ ಮದ್ಯ ಸಾಗಾಟ ಮಾರಾಟದ ಬಗ್ಗೆ ಜಿಲ್ಲೆಯಲ್ಲಿ ಈ ವರೆಗೆ ಅಬಕಾರಿ  ಸಿಬ್ಬಂದಿ 120 ದಾಳಿ ನಡೆಸಿದ್ದು, ಮದ್ಯದಂಗಡಿಗಳ ಸನ್ನದು ಶಿಸ್ತು ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ 19 ಪ್ರಕರಣ ದಾಖಲಿಸಲಾಗಿದೆ.

ADVERTISEMENT

ಅಂಗಡಿ, ಹೋಟೆಲ್, ಡಾಬಾಗಳಲ್ಲಿ ಅಕ್ರಮ ಮದ್ಯ ಸೇವನೆಗೆ ಅವಕಾಶ ನೀಡಿರುವುದಕ್ಕೆ ಸಂಬಂಧಿಸಿದಂತೆ 21 ಪ್ರಕರಣ ದಾಖಲಿಸಲಾಗಿದೆ. 15 ಅಕ್ರಮ ಮದ್ಯ ದಾಸ್ತಾನು ಪ್ರಕರಣಗಳಲ್ಲಿ ಅಂದಾಜು ₹ 57433 ಮೊತ್ತದ 171 ಲೀಟರ್ ಮದ್ಯ ವಶಪಡಿಸಿಕೊಂಡು 20 ಮಂದಿ ಬಂಧಿಸಲಾಗಿದೆ.

ಮದ್ಯದಂಗಡಿಗಳಿಗೆ ಸಗಟು ಖರೀದಿ ಸಂಬಂಧಿಸಿದಂತೆ ಕಠಿಣ ಮಾನದಂಡ ವಿಧಿಸಲಾಗಿದೆ. 2017ರ ಏಪ್ರಿಲ್‌ನಲ್ಲಿನ ಖರೀದಿ ಗಮನಿಸಿ ಅದಕ್ಕೆ ಅನುಗುಣವಾಗಿ ಈ ತಿಂಗಳಿನಲ್ಲಿಯೂ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.ಇದೇ ರೀತಿ ಗ್ರಾಹಕರಿಗೆ ಮಾರಾಟಕ್ಕೆ ಸಂಬಂಧಿಸಿದಂತೆ ಅನುಮಾನಸ್ಪದವಾಗಿ ಕಂಡುಬರುವ ಮದ್ಯದಂಗಡಿಗಳನ್ನು ಆಗಾಗ್ಗೆ ತಪಾಸಣೆ ನಡೆಸಲಾಗುತ್ತಿದೆ.

ಅಬಕಾರಿ ಇಲಾಖೆ ಜಿಲ್ಲಾ ಉಪ ಆಯುಕ್ತರು ಪ್ರತಿನಿತ್ಯ ಜಿಲ್ಲೆಯಲ್ಲಿ ಮದ್ಯ ಉತ್ಪಾದನೆ, ಮಾರಾಟ ಹಾಗೂ ಅಂತಿಮ ಶಿಲ್ಕಿನ ಬಗ್ಗೆ ಹಾಗೂ ಚಿಲ್ಲರೆ ಮದ್ಯದಂಗಡಿಗಳ ಖರೀದಿ ಮತ್ತು ದೈನಂದಿನ ಮಾರಾಟದ ಬಗ್ಗೆ ಚುನಾವಣಾ ಆಯೋಗಕ್ಕೆ ಅಬಕಾರಿ ಆಯುಕ್ತರ ಮೂಲಕ ವರದಿ ಸಲ್ಲಿಸುತ್ತಿದ್ದಾರೆ.

‘ಕೆ.ಎಸ್.ಬಿ.ಸಿ.ಎಲ್. ಡಿಪೋ ಹಾಗೂ ಮದ್ಯ ಉತ್ಪಾದನಾ ಘಟಕಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಅಕ್ರಮ ತಡೆಗೆ ಸೂಕ್ತ ಕ್ರಮ ಜರುಗಿಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.