ADVERTISEMENT

ಅಭಿವೃದ್ಧಿ ಕಾಣದ ಕಾರ್ಗಲ್‌

ಎಂ.ಆರ್.ಬಾಬು
Published 20 ನವೆಂಬರ್ 2013, 7:57 IST
Last Updated 20 ನವೆಂಬರ್ 2013, 7:57 IST

ರಾಮನಾಥಪುರ: ಎಲ್ಲಿ ನೋಡಿದರೂ ಗುಂಡಿ ಬಿದ್ದ ರಸ್ತೆಗಳು, ಎತ್ತ ಹೋದರೂ ದೂಳು, ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ, ಗ್ರಾಮದ ತುಂಬ ಸೊಳ್ಳೆಗಳು, ಶುಚಿತ್ವ ಇಲ್ಲದೇ ಪರದಾಡುತ್ತಿರುವ ಜನ... ಇದು ರಾಮನಾಥಪುರ ಸಮೀಪದ ಕಾರ್ಗಲ್ ಗ್ರಾಮದ ಚಿತ್ರಣ.

ಕೊನನೂರು ಹೋಬಳಿಯ ಹಂಡ್ರಂಗಿ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಪುಟ್ಟ ಗ್ರಾಮ ಮೂಲ ಸೌಕರ್ಯಗಳಿಲ್ಲದೆ ಸೊರಗಿದೆ. ಕುಡಿಯಲು ಶುದ್ಧವಾದ ನೀರು ಸಹ ಇಲ್ಲಿಯ ಜನರಿಗೆ ಲಭಿಸುತ್ತಿಲ್ಲ. ಊರಿಗೆ ದಿನಕ್ಕೆ ಒಂದು ಬಸ್‌ ಬಂದರೆ ಹೆಚ್ಚು. ಗ್ರಾಮದ ಜನರು ದಿನನಿತ್ಯದ ವ್ಯವಹಾರಗಳಿಗೆ ಕೊಣನೂರು ಅಥವಾ ರಾಮನಾಥಪುರಕ್ಕೆ ಬರಬೇಕು. ಆದರೆ, ಈ ಪಟ್ಟಣಗಳಿಗೆ ಹೋಗಲು ಸಹ ಹರಸಾಹಸ ಪಡಬೇಕಾಗಿದೆ. ಶಾಲಾ ಕಾಲೇಜಿಗೆ ಹೋಗುವ ಮಕ್ಕಳ ಕಷ್ಟ ಕೇಳುವವರೇ ಇಲ್ಲದಂತಾಗಿದೆ.

ಈಚೆಗೆ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ₨ 2 ಲಕ್ಷ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.  ಸುಮಾರು 200 ಮೀಟರ್ ಕಾಮಗಾರಿ ಆಗಬೇಕಾಗಿತ್ತು. ಆದರೆ, 100 ಮೀಟರ್‌ ಆಗುತ್ತಿದ್ದಂತೆ ಸ್ಥಗಿತಗೊಂಡಿದೆ. ಚರಂಡಿಗಾಗಿ ರಸ್ತೆಯ ಪಕ್ಕದಲ್ಲಿ ಜೆಸಿಬಿ ಯಂತ್ರದಿಂದ ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದಾಗಿ ಜಾನುವಾರುಗಳು, ಮಹಿಳೆ ಮಕ್ಕಳ ಒಡಾಟಕ್ಕೆ ತೊಂದರೆಯಾಗಿದೆ. ಗ್ರಾಮದ ಪ್ರಮುಖ ರಸ್ತೆಯ ಉದ್ದಕ್ಕೊ ಎರಡು ಬದಿಯಲ್ಲಿ ಜಲ್ಲಿ ಕಲ್ಲು, ಜಲ್ಲಿ ಪೌಡರ್, ಮರಳಿನ ರಾಶಿ ಹಾಕಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ ಎನ್ನುತ್ತಾರೆ ಗ್ರಾಮಸ್ಥರಾದ ಗೋವಿಂದರಾಜು.

ಚರಂಡಿ ಕಾಮಗಾರಿಯಲ್ಲೂ ರಾಜಕೀಯ ನಡೆಯುತ್ತಿದೆ. ಕೆಲವು ಸದಸ್ಯರು ತಮ್ಮ ಪಕ್ಷದ ಮತದಾರರು ಇರುವ ಕಡೆ ಮಾತ್ರ ಕಾಮಗಾರಿ ಮಾಡಿಸಿಕೊಂಡಿದ್ದಾರೆ. ಉಳಿದವರ ಕಷ್ಟ ಕೇಳುವವರೇ ಇಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಸಂಬಂದಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. ಚರಂಡಿ ವಸ್ಯವಸ್ಥೆಯ ಜತೆಗೆ ರಸ್ತೆಗಳ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬಸ್‌ ಸೌಲಭ್ಯ ಇವು ತುರ್ತಾಗಿ ಆಗಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.