ADVERTISEMENT

ಅಭಿವೃದ್ಧಿ ಕಾಣದ ದಾಸನಪುರ

ಗ್ರಾಮ ಸಂಚಾರ

ಎಂ.ಆರ್.ಬಾಬು
Published 3 ಡಿಸೆಂಬರ್ 2014, 6:48 IST
Last Updated 3 ಡಿಸೆಂಬರ್ 2014, 6:48 IST
ರಾಮನಾಥಪುರ ಸಮೀಪದ ದಾಸನಪುರ ಗ್ರಾಮದಲ್ಲಿರುವ ರಸ್ತೆಗೆ ಡಾಂಬರ್ ಹಾಕಿಲ್ಲ
ರಾಮನಾಥಪುರ ಸಮೀಪದ ದಾಸನಪುರ ಗ್ರಾಮದಲ್ಲಿರುವ ರಸ್ತೆಗೆ ಡಾಂಬರ್ ಹಾಕಿಲ್ಲ   

ರಾಮನಾಥಪುರ: ದೊಡ್ಡಮಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ದಾಸನಪುರ ಬರಗೂರು ಸಮೀಪದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದೆ. ಅರಕಲಗೂಡು ತಾಲ್ಲೂಕಿನಲ್ಲಿಯೇ ಅತಿ ಹಿಂದುಳಿದ ಗ್ರಾಮ ಎಂದರೆ ತಪ್ಪಾಗಲಾರದು. ಯಾಕೆಂದರೆ ಈ ಗ್ರಾಮ ಎಲ್ಲ ಸೌಲಭ್ಯಗಳಿಂದ ವಂಚಿತವಾಗಿದೆ.

ಈ ಪುಟ್ಟ ಗ್ರಾಮದಲ್ಲಿ 28 ಮನೆಗಳು ಮಾತ್ರ ಇವೆ. 150ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಚರಂಡಿ, ಶೌಚಾಲಯ, ಬೀದಿ ದೀಪ, ಶುದ್ಧ ಕುಡಿಯುವ ನೀರು... ಹೀಗೆ ಎಲ್ಲ ಸೌಲಭ್ಯಗಳಿಂದ ವಂಚಿತವಾಗಿದೆ.

‘1977ರಲ್ಲಿ  ಕೆಲ ಕುಟುಂಬಗಳು ಹೊಳೆನರಸೀಪುರ ತಾಲ್ಲೂಕಿನಿಂದ ನಿರ್ಗತಿಕರಾಗಿ ಈ ಭಾರೆ ಪ್ರದೇಶಕ್ಕೆ ವಲಸೆ ಬಂದವಂತೆ, ವರ್ಷಗಳು ಉರುಳಿದಂತೆ 28 ಕುಟುಂಬಗಳು ಇಲ್ಲೇ ನೆಲೆಯೂರಿ ಅಲ್ಪ ಸ್ವಲ್ಪ ಭೂಮಿ ಖರೀದಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಆದರೆ, ಕೆಲವರಿಗೆ ಮಾತ್ರ ಭೂಮಿ ಇದೆ. ಇನ್ನುಳಿದ ಕೆಲವು ಕುಟುಂಬಗಳು ಇಂದಿಗೂ ಕೂಲಿ ಕಾರ್ಮಿಕರಾಗಿ ಬದುಕು ನಡೆಸುತ್ತಿದ್ದಾರೆ. ಗ್ರಾಮ ತಾಲ್ಲೂಕು ಕೇಂದ್ರದಿಂದ ಕೇವಲ 8 ಕಿಮೀ. ದೂರದಲ್ಲಿದೆ.

ಸುಮಾರು 38 ವರ್ಷಗಳಿಂದ ಈ ಗ್ರಾಮಕ್ಕೆ ಯಾವುದೇ  ಅಭಿವೃದ್ಧಿಗೆ  ಅನುದಾನ ದೊರೆತ್ತಿಲ್ಲ’ ಎನ್ನುತ್ತಾರೆ ಈ ಗ್ರಾಮದ ಹಿರಿಯ ಬೇಲೂರಯ್ಯ.

ಇರುವ 28 ಮನೆಯಲ್ಲಿ 10 ಮನೆಯಲ್ಲಿ ಬಿ.ಪಿ.ಎಲ್ ಕಾರ್ಡುದಾರರಿದ್ದಾರೆ. ಇನ್ನುಳಿದವರಿಗೆ ಇಲ್ಲಿಯವರೆಗೆ ಕಾರ್ಡ್‌ ಸಿಕ್ಕಿಲ್ಲ. ಈ ಊರಿಗೆ  ಸುಮಾರು 300 ಮೀ. ನಷ್ಟು ರಸ್ತೆ ಇದೆ. ಕಿತ್ತು ಬಂದಿರುವ ಕಲ್ಲು ಗುಂಡಿಗಳ ರಸ್ತೆ ಇದಾಗಿದೆ.

ಶೌಚಾಲಯದ ಸಮಸ್ಯೆ: ವಾಸ ಮಾಡಲು ಯೋಗ್ಯ ಮನೆ ಇಲ್ಲ ಎಂದ ಮೇಲೆ ಶೌಚಾಲಯ ಎಲ್ಲಿಂದ ತರಲಿ? ಎಂದು ಗ್ರಾಮದ ಯುವಕ ಮಹಾದೇವ್ ಪ್ರಶ್ನಿಸುತ್ತಾರೆ.

‘ಸಂಸದರ ಗ್ರಾಮಾಭಿವೃದ್ಧಿ ಯೋಜನೆಯಡಿ ದೇವೇಗೌಡರು ನಮಮ ಹಳ್ಳಿಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಬೇಕು’ ಎಂದು ಈ ಗ್ರಾಮದ ಯುವಕ ಪುಟ್ಟರಾಜು ಒತ್ತಾಯಿಸುತ್ತಾರೆ.

ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರು ಗ್ರಾಮದಲ್ಲಿ ಚರಂಡಿ, ಶೌಚಾಲಯ, ರಸ್ತೆ ಸೌಲಭ್ಯಗಳಾಗುವಂತೆ ಕ್ರಮ ಕೈಗೊಳ್ಳಬೇಕು  ಎಂಬುದು ಈ ಗ್ರಾಮಸ್ಥರ ಒಕ್ಕೂರಲಿನ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.