ADVERTISEMENT

ಅಭಿವೃದ್ಧಿ ಕಾಣದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌

​ಪ್ರಜಾವಾಣಿ ವಾರ್ತೆ
Published 18 ಜನವರಿ 2016, 6:45 IST
Last Updated 18 ಜನವರಿ 2016, 6:45 IST
ಹಾಸನದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಲ್ಲಿ ಈಚೆಗೆ ನಿರ್ಮಿಸಿರುವ ವಾಕಿಂಗ್‌ ಪಾಥ್‌
ಹಾಸನದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಲ್ಲಿ ಈಚೆಗೆ ನಿರ್ಮಿಸಿರುವ ವಾಕಿಂಗ್‌ ಪಾಥ್‌   

ಹಾಸನ: ನಗರದ ಆಯಕಟ್ಟಿನ ಪ್ರದೇಶದಲ್ಲಿರುವ ಸಿಲ್ವರ್ ಜ್ಯೂಬಿಲಿ ಪಾರ್ಕ್‌ ಈಗ ಮತ್ತೆ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕಾಗಿ ಸಿದ್ಧ ವಾಗುತ್ತಿದೆ. ಎರಡು ವರ್ಷಗಳ ನಂತರ ಈ ಪಾರ್ಕ್‌ನಲ್ಲಿ ಪ್ರದರ್ಶನ ನಡೆಯಲಿದೆ.

ನಗರದ ಮಧ್ಯದಲ್ಲಿರುವ ಐದು ಎಕರೆ ವಿಸ್ತಾರವಾಗಿರುವ ಈ ಪಾರ್ಕ್‌ಗೆ ಜನರು ಬರುವುದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಾತ್ರ. ಪ್ರದರ್ಶನ ಉದ್ಘಾಟಿಸುವ ಸಚಿವರು ಅಥವಾ ಶಾಸಕರು ‘ಈ ಪಾರ್ಕ್‌ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಕೊಡಿಸ ಲಾಗುವುದು’ ಎಂಬ ಭರವಸೆಯನ್ನು ಕಳೆದ ಹಲವು ವರ್ಷಗಳಿಂದ ಕೊಡು ತ್ತಲೇ ಇದ್ದಾರೆ. ತೋಟಗಾರಿಕಾ ಇಲಾಖೆ ಯವರಂತೂ ಸರ್ಕಾರಕ್ಕೆ ಪ್ರಸ್ತಾವನೆಗಳ ಮೇಲೆ ಪ್ರಸ್ತಾವನೆಗಳನ್ನು ಕೊಡುತ್ತಿದ್ದಾರೆ. ಆದರೆ ಅಭಿವೃದ್ಧಿ ಕನಸು ಈಡೇರುತ್ತಿಲ್ಲ.

ಕೆಲವು ವರ್ಷಗಳ ಹಿಂದೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಫಲಪುಷ್ಪ ಪ್ರದರ್ಶನ ಉದ್ಘಾಟನೆಗೆ ಬಂದಿದ್ದಾಗ, ‘ಬಜೆಟ್‌ಗೂ ಮೊದಲು ಪ್ರಸ್ತಾವನೆ ಸಲ್ಲಿಸಿದರೆ ಪಾರ್ಕ್‌ ಅಭಿ ವೃದ್ಧಿಗೆ ಹಣ ಮಂಜೂರು ಮಾಡಿಸು ತ್ತೇನೆ’ ಎಂದಿದ್ದರು. ಅಧಿಕಾರಿಗಳು ಎದ್ದು ಬಿದ್ದು ಮೂರು ಕೋಟಿ ರೂಪಾಯಿ ವೆಚ್ಚದ ಒಂದು ಯೋಜನೆ ತಯಾರಿಸಿ ಸೋಮಣ್ಣ ಮೇಜಿನ ಮೇಲಿಟ್ಟರು. ಬಜೆಟ್‌ನಲ್ಲಿ ಹಣ ಮಾತ್ರ ಬಂದಿಲ್ಲ.

ಈಗ ಒಂದೂವರೆ ವರ್ಷ ಹಿಂದೆ ಸುಮಾರು ₹ 1.54 ಕೋಟಿ ವೆಚ್ಚದ ಇನ್ನೊಂದು ಪ್ರಸ್ತಾವನೆಯನ್ನು ಇಲಾಖೆಯವರು ಕಳುಹಿಸಿದ್ದಾರೆ.
ಆ ಯೋಜನೆ ಪ್ರಕಾರ ಪಾರ್ಕ್‌ ಒಳಗೆ ಸುತ್ತ ಸುಮಾರು 1.5 ಕಿ.ಮೀ. ಉದ್ದದ ವಾಕಿಂಗ್‌ ಪಾಥ್ ನಿರ್ಮಿಸುವುದು, ಸಂಗೀತ ಕಾರಂಜಿ, ಒಂದೆರಡು ಕೊಳಗಳನ್ನು (ಮಳೆನೀರು ಸಂಗ್ರಹಿಸಿ) ನಿರ್ಮಿಸಿ ಅಲ್ಲಿ ಪಕ್ಷಿಗಳನ್ನು ಬಿಡುವುದು, ಮಕ್ಕಳ ಪಾರ್ಕ್‌, ಉತ್ತರ ಭಾಗದಲ್ಲಿರುವ ಗೇಟ್‌ ಬಳಿ ನರ್ಸರಿಗೆ ಅವಕಾಶ, ವಾಕಿಂಗ್‌ ಪಾಥ್‌ನಲ್ಲಿ ಮೂರು ಕಡೆ ಸಣ್ಣ ಸೇತುವೆಗಳ ನಿರ್ಮಾಣ, ಒಂದು ತೆರೆದ ರಂಗಮಂದಿರ, ಒಂದು ಭಾಗದಲ್ಲಿ ಲಾನ್‌... ಹೀಗೆ ಹಲವು ವಿಚಾರ ಪ್ರಸ್ತಾವನೆಯಲ್ಲಿ ಉಲ್ಲೇಖಿಸ ಲಾಗಿದೆ.

ರಾಜ್ಯದ ಉದ್ಯಾನಗಳ ನಿರ್ವಹಣೆಗಾಗಿಯೇ ಸುವರ್ಣ ಕರ್ನಾಟಕ ಉದ್ಯಾನ ವನಗಳ ಪ್ರತಿಷ್ಠಾನ (ಎಸ್‌ಕೆವಿಪಿ) ರಚಿಸಲಾಗಿದ್ದು, ಅಲ್ಲಿಂದ ₹ 1.54 ಕೋಟಿ ಅನುದಾನ ಕೊಡುವಂತೆ ಇಲಾಖೆ ಮನವಿ ಮಾಡಿದೆ. ಆದರೆ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ ಅನ್ನು ನರ್ಸರಿ ಎಂದು ಪರಿಗಣಿಸಿರುವುದರಿಂದ ಎಸ್‌ಕೆವಿಪಿಯಿಂದ ಹಣ ಕೊಡಲು ತಾಂತ್ರಿಕ ಅಡಚಣೆ ಇದೆ. ಆದರೆ ಇದು ಅತಿ ಸಣ್ಣ ವಿಚಾರ, ಸರ್ಕಾರದ ಸಂಸ್ಥೆಯೇ ಆಗಿರುವುದರಿಂದ ಸಣ್ಣಪುಟ್ಟ ತಿದ್ದುಪಡಿಗಳನ್ನು ಮಾಡಿ ಹಣ ಕೊಡಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಪ್ರಸಕ್ತ ಪಾರ್ಕ್‌ ಒಳಗೆ ಸುಮಾರು ನೂರು ಮೀಟರ್‌ ಉದ್ದದ ವಾಕಿಂಗ್‌ ಪಾಥ್‌ ನಿರ್ಮಾಣ ಆಗಿದೆ. ಅದನ್ನು ಕರ್ನಾಟಕ ರಾಜ್ಯ ತೋಟಗಾರಿಕಾ ಅಭಿವೃದ್ಧಿ ಏಜನ್ಸಿ (ಕ್ಷಡ)ಯ ಅನುದಾನದಲ್ಲಿ ನಿರ್ಮಿಸಲಾಗಿದೆ. ಅಲ್ಲಿಂದ ಬರುವ ಅನುದಾನಕ್ಕೆ ಮಿತಿ ಇರುವುದರಿಂದ ಯೋಜನೆ ಪೂರ್ಣಗೊಳಿಸಲು ದಶಕವೇ ಬೇಕಾಗ ಬಹುದು. ನಮ್ಮ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಒಂದೂವರೆ ಕೋಟಿ ರೂಪಾಯಿ ದೊಡ್ಡ ಮೊತ್ತ ವೇನೂ ಅಲ್ಲ. ಹಣ ಬಂದರೆ ಒಂದು ವರ್ಷದೊಳಗೆ ಒಳ್ಳೆಯ ಪಾರ್ಕ್‌ ಒಂದನ್ನು ಅಭಿವೃದ್ಧಿ ಪಡಿಸ ಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈಚೆಗೆ ಜಿಲ್ಲೆಯಲ್ಲಿ ಸಾವಿರ ಕೋಟಿ ರೂಪಾಯಿಯ ಯೋಜನೆಗಳ ಶಂಕು ಸ್ಥಾಪನೆ, ಉದ್ಘಾಟನೆ ಮಾಡಿ ಹೋಗಿದ್ದಾರೆ. ಈ ಪಾರ್ಕ್‌ಗೂ ಒಂದಿಷ್ಟು ಅನುದಾನ ಕೊಡುವರೇ ? ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಗಣರಾಜ್ಯೋತ್ಸವದ ದಿನ ಅನುದಾನದ ಭರವಸೆ ನೀಡುವರೇ? ಎಂದು ಕಾಯ್ದು ನೋಡಬೇಕಾಗಿದೆ.

ದಾಖಲೆಗಳೇ ಇಲ್ಲ
ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ ನಗರಸಭೆಯ ವ್ಯಾಪ್ತಿಯಲ್ಲಿದೆ. ಇದನ್ನು ನರ್ಸರಿ ಎಂದು ಪರಿಗಣಿಸಿರುವುದರಿಂದ ತೋಟಗಾರಿಕಾ ಇಲಾಖೆ ನಿರ್ವಹಿಸುತ್ತಿದೆ. ವಿಶೇಷವೆಂದರೆ ಈ ಐದು ಎಕರೆ ಜಾಗದ ಬಗ್ಗೆ ನಗರಸಭೆಯಲ್ಲಾಗಲಿ, ತಾಲ್ಲೂಕು ಕಚೇರಿಯಲ್ಲಾಗಲಿ ದಾಖಲೆಗಳೇ ಇಲ್ಲ.

1960ಕ್ಕೂ ಹಿಂದೆಯೇ ಇದನ್ನು ಪಾರ್ಕ್‌ ಎಂದು ಗುರುತಿಸಿ, ಕಾಂಪೌಂಡ್‌ ನಿರ್ಮಿಸಿ ಬಿಟ್ಟಿದ್ದರಿಂದ ನಿರ್ವಹಣೆ ಆಗುತ್ತಿದೆ. ಆದರೆ ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಾಪಿಡುವ ಕೆಲಸವನ್ನು ಯಾರೂ ಮಾಡಿಲ್ಲ. ಈಗಲೂ ದಾಖಲೆಗಳನ್ನು ಸೃಷ್ಟಿಸುವುದು ದೊಡ್ಡ ಸಮಸ್ಯೆಯಲ್ಲ. ಒಂದು ಕಡೆಯಿಂದ ಎಲ್ಲವನ್ನೂ ಮಾಡುತ್ತ ಬಂದರೆ ನಗರದ ಜನರಿಗೆ ಅನುಕೂಲ ಆಗುತ್ತದೆ ಎಂಬುದು ಜನರ ಅಭಿಪ್ರಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.