ADVERTISEMENT

ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 7:04 IST
Last Updated 1 ಜನವರಿ 2014, 7:04 IST

ಹಾಸನ: ಮುಖ್ಯಮಂತ್ರಿ ನಿಧಿಯಿಂದ ನಗರಸಭೆಗೆ ಬಂದಿರುವ 30 ಕೋಟಿ ರೂಪಾಯಿ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೆ ಸೋಮವಾರ ಶಾಸಕ ಎಚ್‌.ಎಸ್‌. ಪ್ರಕಾಶ್‌  ಗುದ್ದಲಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಹಾಸನಾಂಬ ದೇವಸ್ಥಾನದ ಆವರಣದಲ್ಲಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಪತ್ರಕರ್ತರೊಡನೆ ಮಾತನಾಡಿದ ಅವರು, ‘ಈ ಹಣವನ್ನು ನಗರದ ರಸ್ತೆ ಹಾಗೂ ಒಳಚರಂಡಿ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಬಹುತೇಕ ಎಲ್ಲ ರಸ್ತೆಗಳನ್ನೂ ದುರಸ್ತಿ ಮಾಡಲಾ ಗುತ್ತಿದ್ದು, ಯಾವುದಾದರೂ ರಸ್ತೆ ಕೈಬಿಟ್ಟುಹೋಗಿದ್ದರೆ ನಗರಸಭೆ ಫಂಡ್‌ನಿಂದ ಅದನ್ನು ದುರಸ್ತಿಪಡಿಸಲು ಅವಕಾಶ ಇದೆ. ಈ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಎಂಜಿನಿಯರ್‌ಗಳು ಮತ್ತು ನಗರಸಭೆಯ ಆಯುಕ್ತರೇ ಹೊಣೆಗಾರರಾಗುತ್ತಾರೆ’ ಎಂದರು.

‘ಈ ಕಾಮಗಾರಿಗಳಿಗೆ ಹಿಂದಿನ ಉಸ್ತುವಾರಿ ಸಚಿವ ಸೋಮಣ್ಣ ಅವರೇ ಚಾಲನೆ ನೀಡಿದ್ದರು. ಟೆಂಡರ್‌ ಕಾಮಗಾರಿ ಮುಗಿದಿದ್ದರೂ ಒಪ್ಪಂದ, ಕಾರ್ಯಾದೇಶ ಮುಂತಾದ ಪ್ರಕ್ರಿಯೆಗಳು ಆಗುವ ಮೊದಲೇ ಚುನಾವಣೆ ಬಂದಿದ್ದರಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಈಗ ಗುತ್ತಿಗೆದಾ ರರ ಒತ್ತಾಯಕ್ಕೆ ಕಾಮಗಾರಿಗೆ ಚಾಲನೆ ಮಾಡಿದ್ದೇವೆ. ಇಲ್ಲಿ ಶಿಷ್ಟಾಚಾರ ಉಲ್ಲಂಘನೆಯ ವಿಚಾರ ಬರುವುದಿಲ್ಲ ಎಂದು ಪ್ರಕಾಶ್‌ ಸ್ಪಷ್ಟಪಡಿಸಿದರು.

ಕೆಎಂಆರ್‌ಪಿ ಯೋಜನೆಯಡಿ ನಗರಸಭೆ ಕೈಗೆತ್ತಿಕೊಂಡಿದ್ದ ಕಾಮಗಾರಿಗಳು ಬರುವ ಫೆಬ್ರುವರಿ ವೇಳೆಗೆ ಮುಕ್ತಾಯವಾಗುವವು. 30 ಕೋಟಿ ರೂಪಾಯಿಯಲ್ಲಿ ಕೈಗೆತ್ತಿಕೊಂಡಿರುವ ಈ ಕಾಮಗಾರಿಗಳೂ ವರ್ಷದೊಳಗೆ ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.