ADVERTISEMENT

ಅರಕಲಗೂಡು ದಸರಾಕ್ಕೆ ಕಲಾ ಮೆರುಗು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 8:45 IST
Last Updated 8 ಅಕ್ಟೋಬರ್ 2011, 8:45 IST

ಅರಕಲಗೂಡು : ಪಟ್ಟಣದಲ್ಲಿ ಗುರುವಾರ ರಾತ್ರಿ ನಡೆದ ದಸರಾ ಉತ್ಸವವು ಸಡಗರ ಸಂಭ್ರಮಗಳಿಂದ ಕೂಡಿದ್ದು ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಪಟ್ಟಣದ ವಿವಿಧ ದೇವಾಲಯಗಳ ದೇವತೆಗಳನ್ನು ವಿವಿಧ ರೀತಿಯಲ್ಲಿ ಅಲಂಕರಿಸಿ ಬಣ್ಣಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಿ ಮೆರವಣಿಗೆಯಲ್ಲಿ ಬನ್ನಿ ಮಂಟಪಕ್ಕೆ ಕರೆದೊಯ್ಯಲಾಯಿತು. ದೇವತೆಗಳ ಸಂಗಡ “ ನೇಗಿಲು  ಹೊತ್ತ ರೈತ “ ಲೋಕಪಾಲ್ ಮಸೂದೆ ಜಾರಿಗೆ ಅಣ್ಣಾ ಹಜಾರೆ ನಡೆಸಿದ ಹೋರಾಟ, ರಾಮ-ರಾವಣರ ಯುದ್ದ, ರುದ್ರಪಟ್ಟಣದ ಸಪ್ತಸ್ವರ ನಾದ ದೇವತೆ ಮಂದಿರ ಸೇರಿದಂತೆ  ವಿವಿದ ಸ್ತಬ್ಧ ಚಿತ್ರಗಳು ಉತ್ಸವದಲ್ಲಿ ಪಾಲ್ಗೊಂಡು ಆಕರ್ಷಣೆ ಹೆಚ್ಚಿಸಿತು.

ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ವಿವಿಧ ಉತ್ಸವಗಳು ರಾತ್ರಿ 8 ಗಂಟೆ ವೇಳೆಗೆ ಜಮಾಯಿಸಿದವು. ವಿಜಯದಶಮಿ ಮಹೋತ್ಸವ ಸಮಿತಿ ಅಧ್ಯಕ್ಷ ಹಾಗೂ ಚಿಲುಮೆ ಮಠದ ಮಠಾಧೀಶ ಜಯದೇವಸ್ವಾಮೀಜಿ, ಅರೇಮಾದನ ಹಳ್ಳಿ ಮೂಲಮಠದ ಶಿವಸುಜ್ಞಾನ ಮೂರ್ತಿ ಸ್ವಾಮೀಜಿ, ದೊಡ್ಡಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕೆಸವತ್ತೂರು ವಿರಕ್ತಮಠದ ಬಸವ ರಾಜೇಂದ್ರ ಸ್ವಾಮೀಜಿ, ಕೆರೆಗೋಡು ಮಠದ  ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಎ.ಮಂಜು, ತಹಶೀಲ್ದಾರ್ ಎಂ.ಕೆ. ಸವಿತ, ಲಕ್ಷ್ಮಿ ನರಸಿಂಹಸ್ವಾಮಿ, ಅಮೃತೇಶ್ವರಸ್ವಾಮಿ, ಗ್ರಾಮ ದೇವತೆ ದೊಡ್ಡಮ್ಮ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಉತ್ಸವಗಳ ಮೆರವಣಿಗೆಗೆ ಚಾಲನೆ ನೀಡಿದರು.

ಬನ್ನಿಮಂಟಪದತ್ತ ಚಲಿಸಿದ ಉತ್ಸವಗಳ ಮುಂದೆ ಕೀಲು ಕುದುರೆ, ವೀರಗಾಸೆ, ಕೋಲಾಟ, ಕಂಸಾಳೆ, ಯಕ್ಷಗಾನ ಮುಂತಾದ ಜಾನಪದ ಕಲಾ ಪ್ರಕಾರಗಳು ನಡೆಸಿದ ಪ್ರದರ್ಶನ ಜನರನ್ನು ರಂಜಿಸಿದವು. ದೊಡ್ಡಮ್ಮ ವೃತ್ತದಿಂದ ಹೊರಟ ಮೆರವಣಿಗೆ ಅ.ನ.ಕೃ. ವೃತ್ತವನ್ನು ದಾಟಿ ಸಂತೆಮರೂರು ರಸ್ತೆಯಲ್ಲಿರುವ ಬನ್ನಿ ಮಂಟಪವನ್ನು ಸೇರಿತು.

ಸಾವಿರಾರು ಮಂದಿ ಜನರು ಉತ್ಸವದ ಸಂಗಡ ಹೆಜ್ಜೆ ಹಾಕಿದರು. ಬನ್ನಿ ಮಂಟಪಕ್ಕೆ ದೇವತೆಗಳ ಉತ್ಸವ ಆಗಮಿಸಿದ ನಂತರ ಶಮಿ ಪೂಜೆ, ಕದಳಿ ಛೇದನ, ಮಹಾ ಮಂಗಳಾರತಿ ನಡೆದ ಬಳಿಕ ಉತ್ಸವದಲ್ಲಿ ಬಂದಿದ್ದ ಎಲ್ಲ ದೇವತೆಗಳಿಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಬನ್ನಿ ಸಮರ್ಪಣೆ ನಡೆಯಿತು.

ಬನ್ನಿ ಮಂಟಪದಲ್ಲಿ ಕಲಾ ತಂಡಗಳು ಇನ್ನಷ್ಟು ಬಗೆಯ ಕಲಾ ಪ್ರದರ್ಶನ ನೀಡಿ ನೆರೆದಿದ್ದ ಜನರಿಗೆ ಮನರಂಜನೆ ನೀಡಿದವು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮುದ್ದೇಗೌಡ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎ.ಮಂಜು, ಪಟ್ಟಣದ ಹದಿನೆಂಟು ಕೋಮಿನ ಜನತೆ ಪ್ರತಿವರ್ಷ ಆಚರಿಸುವ ಸೌಹಾರ್ದ ದಸರಾ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದೆ. 

 ದೇವತೆಗಳ ಉತ್ಸವಗಳನ್ನು ಇನ್ನೂ ಆಕರ್ಷಕವಾಗಿಸಲು ಮುಂದಿನ ಸಾಲಿನಿಂದ ಉತ್ಸವ ಸಮಿತಿಗಳಿಗೆ ಧನ ಸಹಾಯ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು.

ಪ.ಪಂ. ಅಧ್ಯಕ್ಷೆ ಯಶೋಧಮ್ಮ, ಉಪಾಧ್ಯಕ್ಷ ರಮೇಶ್, ಜಿ.ಪಂ. ಸದಸ್ಯ ವಿ.ಎ. ನಂಜುಂಡಸ್ವಾಮಿ, ಪ.ಪಂ. ಸದಸ್ಯರು, ಪಟ್ಟಣದ ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕೃಷಿ ಪ್ರಶಸ್ತಿ ವಿಜೇತ ಬೆಳೆಗಾರ ಮುದಗನೂರು ಚಂದ್ರಪ್ಪ, ಸಮಾಜ ಸೇವಕ ಮರಿಯಪ್ಪ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪರಮೇಶ್ ಅವರನ್ನು ಗೌರವಿಸಲಾಯಿತು. ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ಎ.ಪಿ.ಶಂಕರ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.