ADVERTISEMENT

ಆಕಾಶವಾಣಿ ಹಬ್ಬಕ್ಕೆ ಬಂದ ಕೇಳುಗ ಬಳಗ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 10:15 IST
Last Updated 14 ಫೆಬ್ರುವರಿ 2012, 10:15 IST

ಹಾಸನ: ಹಾಸನ ಆಕಾಶವಾಣಿ ಹಮ್ಮಿಕೊಂಡಿರುವ `ಆಕಾಶವಾಣಿ ಹಬ್ಬ~ಕ್ಕೆ ಭಾನುವಾರ ಸಂಜೆ ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಚಾಲನೆ ನೀಡಲಾಯಿತು.

ಭಾನುವಾರ ಮತ್ತು ಸೋಮವಾರಗಳಂದು ಶ್ರವಣ ಬೆಳಗೊಳ ಹಾಗೂ ಹಾಸನದ ಸಂಗೀತ ಮತ್ತು ನೃತ್ಯಾಸಕ್ತರು ಕಾರ್ಯಕ್ರಮಗಳ ಮೂಲಕ ನಿಜವಾದ ಹಬ್ಬ ಆಚರಿಸಿದರು.

ಭಾನುವಾರ ಸಂಜೆ ಶ್ರವಣಬೆಳಗೊಳದಲ್ಲಿ ಮಠದ ಸಿದ್ಧಾಂತ ಕೀರ್ತಿ ಸ್ವಾಮೀಜಿ ಆಕಾಶವಾಣಿ ಹಬ್ಬಕ್ಕೆ ಚಾಲನೆ ನೀಡಿದರು. `ಹಾಸನ ಆಕಾಶವಾಣಿ ಜಿಲ್ಲೆಯ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಮುಂದೆಯೂ ಇದೇ ರೀತಿಯ ಸೇವೆ ಮುಂದುವ ರಿಯಲಿ~ ಎಂದು ಸ್ವಾಮೀಜಿ ಹಾರೈಸಿದರು.

ಪ್ರಾಸ್ತಾವಿಕ ಮಾತನಾಡಿದ ಆಕಾಶವಾಣಿ ಸಹಾಯಕ ನಿರ್ದೇಶಕಿ ಬಿ.ವಿ. ಪದ್ಮಾ, `ಕೇಳುಗರು ಮತ್ತು ಆಕಾಶವಾಣಿಯ ಸ್ನೇಹಸೇತುವನ್ನು ಇನ್ನಷ್ಟು ಗಟ್ಟಿಗೊಳಿಸುವುದೇ `ಆಕಾಶವಾಣಿ ಹಬ್ಬ~ದ ಉದ್ದೇಶ~ ಎಂದರು.
ಉಪ ನಿರ್ದೇಶಕ ಪಿ.ಎನ್. ಸುಧಾಕರನ್ ಹಾಗೂ ಕೂಷ್ಮಾಂಡಿನಿ ಮಹಿಳಾ ಜೈನ ಮಂಡಳಿಯ ಅಧ್ಯಕ್ಷೆ ಪೂರ್ಣಿಮಾ ಅನಂತಪದ್ಮನಾಭ ವೇದಿಕೆಯಲ್ಲಿದ್ದರು.

ಮೊದಲ ದಿನದ ಕಾರ್ಯಕ್ರಮವಾಗಿ ಕೂಷ್ಮಾಂ ಡಿನಿ ಮಹಿಳಾ ಜೈನ ಮಂಡಳಿಯವರು ಜಾನಪದ ಗೀತೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದೆ ಅಂಬಳೆ ರಾಜೇಶ್ವರಿ ಅವರ ತಂಡದ ವರಿಂದ `ಶಾಂತಲಾ ಸ್ವಪ್ನ~ ನೃತ್ಯ ರೂಪಕ ಪ್ರದರ್ಶನಗೊಂಡಿತು.

ಕೂಷ್ಮಾಂಡಿನಿ ಮಹಿಳಾ ಮಂಡಳಿ ಶ್ರವಣ ಬೆಳಗೊಳದ ಇತಿಹಾಸ, ತ್ಯಾಗ ಮೂರ್ತಿಯನ್ನು ನೋಡಲು ಹೋಗುವ ಭಕ್ತರ ಉತ್ಸಾಹವನ್ನು ಜಾನಪದ ಗೀತೆಗಳು ಹಾಗೂ ನೃತ್ಯದ ಮೂಲಕ ತೆರೆದಿಟ್ಟರು.

ಶಾಂತಲೆಯ ನೃತ್ಯದಿಂದ ಮೋಹಿತನಾದ ವಿಷ್ಣುವರ್ಧನ ಆಕೆಗಾಗಿ ವಿಶ್ವ ವಿಖ್ಯಾತ ದೇಗುಲವನ್ನು ನಿರ್ಮಿಸುವ ಪ್ರಸಂಗವನ್ನು ಅಂಬಳೆ ರಾಜೇಶ್ವರಿ ಹಾಗೂ ತಂಡದವರು ನೃತ್ಯ ರೂಪಕದ ಮೂಲಕ ಬಣ್ಣಿಸಿದರು.
ಎರಡನೇ ದಿನ (ಸೋಮವಾರ) ಹಾಸನದ ಎಸ್.ಆರ್.ಎಸ್. ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ `ಸಂಗೀತ  ರಸಸಂಜೆ~ಯಲ್ಲಿ ಬೆಂಗಳೂರಿನ ಡಾ. ಸುಕನ್ಯಾ ಪ್ರಭಾಕರ ಹಾಗೂ ತಂಡದವರು ಮೈಸೂರು ಟಿ. ಚೌಡಯ್ಯ ಅವರ ಕೃತಿಗಳನ್ನು ಹಾಡಿದರು.

ಸಭಾಂಗಣದ ತುಂಬ ತುಂಬಿದ್ದ ಸಂಗೀತಾಸಕ್ತರು ಈ ಕಾರ್ಯಕ್ರಮ ಆಸ್ವಾದಿಸಿದರು.
ಡಾ. ಸುಕನ್ಯಾ ಜತೆಗೆ ರಂಜಿನಿ ವೆಂಕಟೇಶ್, ಪಿ. ಸುಮನಾ, ಜಿ. ರಾಜಲಕ್ಷ್ಮಿ ಶ್ರೀಧರ್, ಅನುಪಮಾ ಶ್ರೀಮಾಲಿ ಅವರು ತಂಡದಲ್ಲಿದ್ದರು. ಇವರಿಗೆ ವಯೋಲಿನ್‌ನಲ್ಲಿ ನಳಿನಾ ಮೋಹನ್, ಮೃದಂಗದಲ್ಲಿ ಬಿ.ಸಿ. ಮಂಜುನಾಥ್ ಹಾಗೂ ಘಟದಲ್ಲಿ ಬಿ.ಆರ್. ರವಿಕುಮಾರ್ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.