ADVERTISEMENT

ಆಲೂಗಡ್ಡೆಗೆ ಅಂಗಮಾರಿ ಬಾಧೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 8:00 IST
Last Updated 19 ಮಾರ್ಚ್ 2011, 8:00 IST
ಆಲೂಗಡ್ಡೆಗೆ ಅಂಗಮಾರಿ ಬಾಧೆ
ಆಲೂಗಡ್ಡೆಗೆ ಅಂಗಮಾರಿ ಬಾಧೆ   

ಹಳೇಬೀಡು: ಸುತ್ತಲಿನ ಭಾಗದಲ್ಲಿ ಬೇಸಿಗೆ ಹಂಗಾಮಿನ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ಕಾಣಿಸಿಕೊಂಡಿದ್ದು, ಬೆಳೆಗಾರರು ತೀವ್ರ ಸಂಕಷ್ಟ ಸಿಲುಕಿದ್ದಾರೆ.ಮುಂಗಾರು ಹಂಗಾಮಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿ ಬೆಳೆಗೆ ರೋಗ ಹೆಚ್ಚಾಗಿದೆ ಎನ್ನುವ ಮಾತು ರೈತರಿಂದ ಕೇಳಿ ಬಂದಿತ್ತು. ಆದರೆ ಅಂಗಮಾರಿ ರೋಗ ಬೇಸಿಗೆ ಬೆಳೆಯನ್ನು ಬಿಡದೆ ಕಾಡುತ್ತಿರುವುದರಿಂದ ರೈತರು ಆತಂಕಗೊಂಡಿದ್ದಾರೆ.

ಬೇಸಿಗೆ ಹಂಗಾಮಿನಲ್ಲಿ ಮುಂಗಾರು ಬೆಳೆಯಷ್ಟು ಫಸಲು ಬರುವುದಿಲ್ಲ. ಕಡಿಮೆ ಫಸಲು ಬರುವ ಸಮಯ ದಲ್ಲೂ ರೋಗ ಅಂಟಿರುವುದರಿಂದ ಆಲೂ ಬೆಳೆದ ರೈತರಿಗೆ ನಷ್ಟ ಕಟ್ಟಿಟ್ಟ ಬುತ್ತಿಯಾಗಿದೆ.ಹಲವು ರೈತರು ಆಲೂಗೆಡ್ಡೆ ಕಟಾವು ಮಾಡುತ್ತಿದ್ದು, ನಿರೀಕ್ಷಿತ ಫಸಲು ದೊರಕದೆ ಪರದಾಡುತ್ತಿದ್ದಾರೆ. ಗಿಡ ಆರೋಗ್ಯಕರವಾಗಿ ಬೆಳೆಯಲು ರೋಗ ಅಡ್ಡಿಮಾಡಿದ್ದರಿಂದ, ಗೆಡ್ಡೆ ಸರಿಯಾಗಿ ಕಟ್ಟಲು ಅವಕಾಶವಾಗಲಿಲ್ಲ. ಹೀಗಾಗಿ ನಿರೀಕ್ಷಿತ ಫಸಲು ಕೈಗೆ ಸಿಗಲಿಲ್ಲ ಎನ್ನುವ ಮಾತು ರೈತರಿಂದ ಕೇಳಿ ಬರುತ್ತಿದೆ.

ಭೂಮಿಯಲ್ಲಿ ಭಾರಿ ಪ್ರಮಾಣದಲ್ಲಿ ಆಲೂಗೆಡ್ಡೆ ಬೆಳೆದಿರಬಹುದು, ಆರ್ಥಿಕ ವಾಗಿ ಸಬಲರಾಗಬಹುದು ಎಂದು ನಿರೀಕ್ಷಿಸಿದ್ದ ರೈತರ ಕನಸುಗಳೆಲ್ಲ ಚೂರಾಗಿದೆ. ಗಿಡ ಒಂದಕ್ಕೆ ಕೆ.ಜಿ. ಗಳಷ್ಟು ಗೆಡ್ಡೆ ಬರಬೇಕು. ಕೆಲವು ಜಮೀನಿನಲ್ಲಿ ಗಿಡಕ್ಕೆ ಎರಡು, ಮೂರು ಗೆಡ್ಡೆ ಮಾತ್ರ ಕೈಯಿಗೆ ಸಿಗುತ್ತಿದೆ. ಬೆಳೆ ಮಾಡಲು ಹಾಕಿದ ಬಂಡವಾಳ ಸಹ ರೈತರು ದುಡಿಯಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ‘ನಮ್ಮ ಭೂಮಿಯಲ್ಲಿ ಯಾವ ಕಾಲ ಮಾನದಲ್ಲಿಯೂ ಆಲೂಗೆಡ್ಡೆ ಬೆಳೆ ಯಲು ಸಾಧ್ಯವಿಲ್ಲ. ರೋಗ ನಿಯಂತ್ರಣಕ್ಕಾಗಿ ಸಾವಿರಾರು ರೂ. ಖರ್ಚು ಮಾಡಿ ಹೆಚ್ಚಿನ ಬೆಲೆಯ ಔಷಧ ಸಿಂಪಡಿಸಿದರೂ, ಪ್ರಯೋಜನ ಆಗುತ್ತಿಲ್ಲ’ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.