ಹಾಸನ: ಹಾಸನದ ಜನರು ನೋಡನೋಡುತ್ತಿದ್ದಂತೆ, ನಿರೀಕ್ಷೆಗೂ ಮೀರಿದ ವೇಗದಲ್ಲಿ ಹಾಸನದಲ್ಲಿ ಮೆಡಿಕಲ್ ಕಾಲೇಜು ಆರಂಭವಾಯಿತು. ಆರಂಭದಲ್ಲಿ ಕಾಲೇಜಿನ ಜಾಗ, ವ್ಯವಸ್ಥೆಗಳ ಬಗ್ಗೆ ಹಲವು ಅಪಸ್ವರಗಳು ಬಂದರೂ ಕಾಲೇಜು ಆರಂಭವಾದ ಬಗ್ಗೆ ಜನರು ಸಂತೋಷವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಈಚಿನ ಕೆಲವು ವರ್ಷಗಳಲ್ಲಿ ಕಾಲೇಜು ವಿವಾದದ ಕೇಂದ್ರವಾಗುತ್ತಿದೆ.
ಸಿಬ್ಬಂದಿಯ ನೇಮಕಾತಿಯಲ್ಲಿ ಆಗಿರುವ ವಿವಾದ, ಆಮೇಲೆ ನಡೆದ ಸಾಲು ಸಾಲು ಪ್ರತಿಭಟನೆಗಳು, ಉಪನ್ಯಾಸಕರ ವಿರುದ್ಧ ಹತ್ತು ಹಲವು ಆರೋಪಗಳು, ಅಕ್ರಮವಾಗಿ ವಿದೇಶದಿಂದ ಯಂತ್ರೋಪಕರಣ ಖರೀದಿ... ಹೀಗೆ ಒಂದರ ಹಿಂದೆ ಒಂದರಂತೆ ಪ್ರಕರಣಗಳು ಬೆಳಕಿಗೆ ಬಂದವು.
ಒಂದೆಡೆ ಹಗರಣಗಳು ಕಾಲೇಜಿನ ಗೌರವಕ್ಕೆ ಧಕ್ಕೆ ತರುತ್ತಿದ್ದರೆ, ಸರ್ಕಾರ ಹಣ ಬಿಡುಗಡೆಯಲ್ಲಿ ವಿಳಂಬ ಮಾಡಿದ್ದರಿಂದ ಆಗಬೇಕಾಗಿರುವ ಕಾಮಗಾರಿಗಳೂ ವಿಳಂಬವಾದವು.
ಭವ್ಯ ಕಟ್ಟಡ ನಿರ್ಮಾಣವಾಗಿ ಕಾಲೇಜು ಆರಂಭವಾಯಿತು. ಆದರೆ 750 ಹಾಸಿಗೆಗಳ ಹೈಟೆಕ್ ಆಸ್ಪತ್ರೆಯ ಕಾಮಗಾರಿ ಅಂತಿಮ ಹಂತಕ್ಕೆ ಬಂದು ಸ್ಥಗಿತಗೊಂಡಿದೆ. ಹಣಕಾಸಿನ ಕೊರತೆಯಿಂದಾಗಿ ಉದ್ಘಾಟನೆಯಾಗದೆ ಉಳಿದುಬಿಟ್ಟಿದೆ. ಮೂರನೇ ಹಂತದ ಕಾಮಗಾರಿಗೆ ಇನ್ನೂ ಹಲವು ಕೋಟಿ ರೂಪಾಯಿ ಬೇಕಾಗಿದೆ.
ಕಾಮಗಾರಿ ವಿಳಂಬ ಮಾಡಿದ್ದರಿಂದ ಮೂಲತಃ 56.42 ಕೋಟಿ ರೂಪಾಯಿಯ ಯೋಜನೆ ಈಗ 79.50 ಕೋಟಿಗೆ ಏರಿಕೆಯಾಗಿದೆ. ಹೆಚ್ಚುವರಿ ಹಣವನ್ನು ಸರ್ಕಾರ ಬಿಡುಗಡೆ ಮಾಡದ ಕಾರಣ ಕಟ್ಟಡದ ಕಾಮಗಾರಿ ಸ್ಥಗಿತಗೊಂಡಿದೆ. ಒಂದೆಡೆ ಆಸ್ಪತ್ರೆಯ ಸಮಸ್ಯೆಯಾದರೆ ಇನ್ನೊಂದೆಡೆ ಅಗತ್ಯ ಸಿಬ್ಬಂದಿ ಹಾಗೂ ಸೌಲಭ್ಯಗಳ ಕೊರತೆಯ ಕಾರಣದಿಂದ ಎಂಸಿಐನವರು ಮಾನ್ಯತೆ ರದ್ದುಮಾಡುವ ಹಂತದವರೆಗೂ ಪರಿಸ್ಥಿತಿ ಬಂದಿತ್ತು.
ಈಗಿರುವ ಜಿಲ್ಲಾ ಆಸ್ಪತ್ರೆ 350 ಹಾಸಿಗೆ ಸಾಮರ್ಥ್ಯ ಹೊಂದಿದೆ. ವೈದ್ಯಕೀಯ ಕಾಲೇಜು ಆರಂಭವಾಗುವುದರ ಜತೆಗೇ ಆಸ್ಪತ್ರೆಯ ಸಾಮರ್ಥ್ಯವನ್ನೂ 750 ಬೆಡ್‌ಗೆ ಹೆಚ್ಚಿಸುವ ಯೋಜನೆ ರೂಪಿಸಲಾಗಿತ್ತು (ಸಾವಿರ ಬೆಡ್‌ಗೆ ಹೆಚ್ಚಿಸಬೇಕು ಎಂಬ ಪ್ರಸ್ತಾವನೆಯೂ ಇದೆ).
ಆದರೆ ಮೂಲತಃ 56.42 ಕೋಟಿಯ ಯೋಜನೆಯನ್ನು ಮೀರಿ ಈಗಾಗಲೇ 61.54 ಕೋಟಿ ರೂಪಾಯಿ ವೆಚ್ಚ ಮಾಡಿಯಾಗಿದೆ. ಇನ್ನೂ 17.95 ಕೋಟಿ ರೂಪಾಯಿ ನೀಡಬೇಕಾಗಿದೆ. ಹಲವು ಮನವಿಪತ್ರಗಳು, ಒತ್ತಾಯಗಳು, ರಾಜಕೀಯ ನಿಯೋಗಗಳು ಹೋಗಿದ್ದರೂ ಈ ಹಣ ಮಾತ್ರ ಬಿಡುಗಡೆಯಾಗಿಲ್ಲ. ಈಗಾಗಲೇ ನಿರ್ಮಾಣ ಪೂರ್ಣಗೊಂಡು ಕಾರ್ಯಾರಂಭ ಮಾಡಬೇಕಿದ್ದ ಹೈಟೆಕ್ ಆಸ್ಪತ್ರೆ ಅಪೂರ್ಣ ಕಟ್ಟಡದ ಸ್ಥಿತಿಯಲ್ಲಿದೆ.
ಪರಿಷ್ಕೃತ ಅಂದಾಜು ಮೊತ್ತಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ, ಕೆಲವೇ ತಿಂಗಳ ಹಿಂದೆ ಮಾಜಿ ಪ್ರಧಾನಿ ಮತ್ತು ಹಿಂದಿನ ಮುಖ್ಯಮಂತ್ರಿಗಳ ನಡುವೆ ಮಾತುಕತೆ ನಡೆದು ಹಣ ಬಿಡುಗಡೆ ಮಾಡುವ ಭರವಸೆಯೂ ಲಭಿಸಿದೆ. ಆದರೆ ಹಣ ಮಾತ್ರ ಬಂದಿಲ್ಲ. ಈ ಬಾರಿಯ ಬಜೆಟ್ ನಂತರ ಹಣ ಬರಬಹುದೆಂಬ ನಿರೀಕ್ಷೆಯಲ್ಲಿ ಆಸ್ಪತ್ರೆಯ ಅಧಿಕಾರಿಗಳು ಇದ್ದಾರೆ.
ಶೀಘ್ರದಲ್ಲೇ ಹಣ ಬಿಡುಗಡೆಯಾದರೆ ಯೋಜನೆ ಪೂರ್ಣಗೊಂಡು ಜಿಲ್ಲೆಯ ರೋಗಿಗಳು ಮಾತ್ರವಲ್ಲ ಇಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಉಪಯೋಗವಾಗುತ್ತದೆ ಎಂಬುದು ವೈದ್ಯರ ಅಭಿಪ್ರಾಯ.
ಶೀಘ್ರದಲ್ಲೇ ಕಾಲೇಜಿಗೆ ಸೌಲಭ್ಯಗಳನ್ನು ಒದಗಿಸದಿದ್ದಲ್ಲಿ ಮಾನ್ಯತೆ ರದ್ದಾಗುವ ಭೀತಿಯನ್ನೂ ಜನಪ್ರತಿನಿಧಿಗಳು ವ್ಯಕ್ತಪಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.