ಹಿರೀಸಾವೆ: ರಾಜ್ಯ ಸರ್ಕಾರವು 2011-12ರ ಸಾಲಿನ ಅನುದಾನವನ್ನು ಮಾರ್ಚ್ 31 ರಂದು ಸಂಬಂಧಪಟ್ಟ ಇಲಾಖೆಗಳಿಗೆ ನೀಡಬೇಕಿತ್ತು. ಆದರೆ, ಯಾವುದೇ ಇಲಾಖೆಗೂ ನೀಡಿಲ್ಲ. ಇದು ರಾಜ್ಯದ ಬೊಕ್ಕಸ ಬರಿದಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಶಾಸಕ ಸಿ.ಎಸ್.ಪುಟ್ಟೇಗೌಡ ಶುಕ್ರವಾರ ಹೋಬಳಿಯ ಮತಿಘಟ್ಟ ಗ್ರಾಮದಲ್ಲಿ ಹೇಳಿದರು.ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಏರ್ಪಡಿಸಿದ್ದ ಕೃಷಿ ಸಾಲದ ಚೆಕ್ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಖ್ಯಮಂತ್ರಿಗಳು ಮತ್ತು ಸಚಿವರುಗಳು ಮರು ಚುನಾವಣೆಯಲ್ಲಿ ಬಿಜಿಯಾಗಿದ್ದಾರೆ, ಅಭಿವೃದ್ಧಿ ಮರೆತಿದ್ದಾರೆ ಎಂದು ಆರೋಪಿಸಿದರು.
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಅನುದಾನ ಬಂದಿದೆ. ಕೆಲವರು ಯಂತ್ರಗಳ ಮೂಲಕ ಕೆಲಸ ಮಾಡಿ ಬಿಲ್ ಪಡೆಯುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಗಮನಹರಿಸಿ ಲೋಪಗಳನ್ನು ಅಧಿಕಾರಿಗಳಿಗೆ ತಿಳಿಸಬೇಕು ಎಂದು ಹೇಳಿದರು.ಹಾಸನ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಮಾತನಾಡಿ, ಜಿಲ್ಲೆಯ ರೈತರಿಗೆ 1.90ಕೋಟಿ ರೂಪಾಯಿಗಳನ್ನು ಕೃಷಿ ಸಾಲವಾಗಿ ನೀಡಲಾಗಿದೆ. ಈ ಸಂಘದಲ್ಲಿ 32 ಲಕ್ಷರೂಪಾಯಿಗಳನ್ನು ವಿತರಣೆ ಮಾಡಲಾಗುತ್ತಿದೆ. ಸಾಲ ಪಡೆದವರು ಸರಿಯಾದ ಸಮಯಕ್ಕೆ ಕಟ್ಟುವಂತೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಅಂಬಿಕಾ ರಾಮಕೃಷ್ಣ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ತೋಟಿ ಜಯರಾಮ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೇವರಾಜೇಗೌಡ, ತಾಪಂ ಮಾಜಿ ಸದಸ್ಯ ಎಚ್.ಜಿ.ರಾಮಕೃಷ್ಣ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕಮಲಮ್ಮ, ತಾಪಂ ಸದಸ್ಯ ರವಿಕುಮಾರ, ಜೆಡಿಎಸ್ ಮುಖಂಡ ಉದಯಕುಮಾರ, ಸಂಘದ ಅಧ್ಯಕ್ಷ ಲಕ್ಕೇಗೌಡ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.