ಹಳೇಬೀಡು: ಬನ್ನಿ ಮರ ಹಾಗೂ ಎರಡು ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಒಬ್ಬರು ಗಾಯಗೊಂಡು, ಮನೆಯೊಂದು ಹಾನಿಗೊಂಡಿರುವ ಘಟನೆ ಬಂಡಿಲಕ್ಕನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಗಣೇಶ ಹಬ್ಬದ ದಿನವಾದ ಗುರುವಾರ ಬನ್ನಿಮರ ಮುರಿದು ಮರದ ಕಟ್ಟೆಯ ಮೇಲೆ ಕುಳಿತಿದ್ದ ಮಲ್ಲೇಶನಾಯ್ಕ ಅವರಿಗೆ ಸೊಂಟ ಹಾಗೂ ಕಾಲಿನ ಮೂಳೆ ಮುರಿದಿದೆ. ಇವರು ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಬ್ಬದ ದಿನ ಸಂಜೆ ಮರದ ಕಟ್ಟೆಯ ಮೇಲೆ ಕುಳಿತು ಮಲ್ಲೇಶನಾಯ್ಕ ವಿಶ್ರಾಂತಿ ಪಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಮರ ಮುರಿದು ಬಿತ್ತು. ಮರದ ಬೃಹತ್ ರೆಂಬೆಯ ಅಡಿಯಲ್ಲಿ ಸಿಲುಕಿದ್ದ ಅವರನ್ನು ರಕ್ಷಿಸಿಲು ಪ್ರಯತ್ನಿಸಿದರೂ, ತೀವ್ರ ಪ್ರಮಾಣದ ಪೆಟ್ಟು ಬೀಳುವುದನ್ನು ತಪ್ಪಿಸಲಾಗಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.
ಮರ ಮುರಿದ ಘಟನೆಯ ಅಘಾತ ಮರೆಯುವುದರಲ್ಲಿಯೇ ಶುಕ್ರವಾರ ಮಧ್ಯಾಹ್ನ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಎರಡು ವಿದ್ಯುತ್ ಕಂಬ ಮನೆಗಳ ಮೇಲೆ ಬಿದ್ದು ಸಾಕಷ್ಟು ಹಾನಿಯಾಗಿದೆ. ಗಿರಿಗೌಡ ಎಂಬುವರ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ದನದ ಕೊಟ್ಟಿಗೆ ಇದ್ದ ಭಾಗದಲ್ಲಿ ಮನೆಗೆ ಹೆಚ್ಚಿನ ಹಾನಿ ಸಂಭವಿಸಿದೆ. ಕಂಬ ಬಿದ್ದ ಕೆಲವೆ ನಿಮಿಷದ ಹಿಂದೆ ಜಾನುವಾರುಗಳು ಮೇಯಲು ಬಿಟ್ಟಿದ್ದರಿಂದ ಭಾರಿ ಪ್ರಮಾಣದ ಅಪಾಯ ತಪ್ಪಿದೆ.
ರಾಮೇಗೌಡ ಹಾಗೂ ಅನಂತೇಗೌಡ ಎಂಬುವರ ಮನೆಗಳಿಗೂ ಭಾಗಶಃ ಹಾನಿಯಾಗಿದೆ. ವಿದ್ಯುತ್ ಸಂಪರ್ಕ ಇರುವ ಸಮಯದಲ್ಲಿಯೇ ಕಂಬಗಳು ಮುರಿದು ಬಿದ್ದಿದೆ, ಕಂಬ ಬೀಳುವ ಸಮಯದಲ್ಲಿ ಲೈನ್ ಶಾರ್ಟ್ ಆಗಿ ಶಬ್ದ ಬಂದಾಗ ಸ್ಥಳದಲ್ಲಿದ್ದ ಗ್ರಾಪಂ ಮಾಜಿ ಸದಸ್ಯೆ ಕೃಷ್ಣಮ್ಮ ಕೂಗಾಡಿದ್ದರಿಂದ ಗಲ್ಲಿಯಲ್ಲಿ ಬರುತ್ತಿದ್ದ ಜನರು ದೂರ ಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಸೆಸ್ಕ್ ಸಿಬ್ಬಂದಿ ತಕ್ಷಣ ಗ್ರಾಮಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ. ತಾತ್ಕಲಿಕ ವಿದ್ಯುತ್ ಸರಬರಾಜು ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಗ್ರಾಮದಲ್ಲಿ ಮತ್ತಷ್ಟು ವಿದ್ಯುತ್ ಕಂಬಗಳ ಸಿಮೆಂಟ್ ಮೆಲ್ಪದರ ಕಿತ್ತುಹೋಗಿದ್ದು ಮುರಿದು ಬೀಳುವ ಸ್ಥಿತಿಯಲ್ಲಿವೆ. ಮುಂದಿನ ದಿನದದಲ್ಲಿ ಅನಾಹುತ ಸಂಭವಿಸುವ ಮೊದಲು ಸೆಸ್ಕ್ ಕಂಪೆನಿ ಕಂಬ ಬದಲಾಯಿಸಬೇಕು ಎಂದು ಸ್ಥಳೀಯ ಗ್ರಾಪಂ ಸದಸ್ಯ ಇಸ್ಮಾಯಿಲ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.