ADVERTISEMENT

ಐಗೂರು ಶಾಲೆಯಲ್ಲಿ ತಾಯಂದಿರ ಸಮಿತಿ

ಜಾನೆಕೆರೆ ಆರ್‌.ಪರಮೇಶ್‌
Published 15 ಜನವರಿ 2012, 9:35 IST
Last Updated 15 ಜನವರಿ 2012, 9:35 IST
ಐಗೂರು ಶಾಲೆಯಲ್ಲಿ ತಾಯಂದಿರ ಸಮಿತಿ
ಐಗೂರು ಶಾಲೆಯಲ್ಲಿ ತಾಯಂದಿರ ಸಮಿತಿ   

ಸಕಲೇಶಪುರ: ತಾಲ್ಲೂಕು ಕೇಂದ್ರದಿಂದ ಸುಮಾರು 30 ಕಿ.ಮೀ. ದೂರದ ಮಲೆನಾಡಿನ ನಿಸರ್ಗದ ಸೆರಗಿನಲ್ಲಿರುವ ಐಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಲ ಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ  ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ.

ಒಂದರಿಂದ 7ನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ ಒಟ್ಟು 95 ವಿದ್ಯಾರ್ಥಿಗಳಿದ್ದಾರೆ. ಮಲೆನಾಡಿನ ಹೆಂಚಿನ ಶೈಲಿಯ ಉತ್ತಮ ಕಟ್ಟಡದಲ್ಲಿ 6 ಕೊಠಡಿಗಳಿವೆ. ಅಕ್ಷರ ದಾಸೋಹಕ್ಕಾಗಿ ಪ್ರತ್ಯೇಕ ಕೊಠಡಿ ಇದ್ದು, ಅಡುಗೆ ಹಾಗೂ ಸಾಮಾಗ್ರಿಗಳನ್ನಿಡುವುದಕ್ಕೆ ವ್ಯವಸ್ಥಿತ ಕೊಠಡಿಗಳಿವೆ. ವಿಶಾಲವಾದ ಆಟದ ಮೈದಾನ,  ಹೆಣ್ಣು  ಹಾಗೂ ಗಂಡು ಮಕ್ಕಳಿಗೆ, ಶಿಕ್ಷಕಿ ಹಾಗೂ ಶಿಕ್ಷಕರಿಗೆ  ಪ್ರತ್ಯೇಕ ಶೌಚಾ ಲಯವಿದೆ. 

5 ಕಂಪ್ಯೂಟರ್‌ಗಳಿದ್ದು, ಪಠ್ಯದ ಜೊತೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿ ದಿನ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುತ್ತಿದೆ. ಶಾಲಾ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳಲ್ಲಿ ಬೇರೆ ಬೇರೆ ಗುಂಪುಗಳನ್ನು ಮಾಡಲಾಗಿದ್ದು, ಆಯಾಯ ಗುಂಪಿನ ವಿದ್ಯಾರ್ಥಿಗಳು ಅವರಿಗೆ ನಿಗದಿಗೊಳಿಸಿದ ದಿನಗಳಂದು  ಶಾಲಾ ಆವರಣವನ್ನು ಸ್ವಚ್ಛಗೊಳಿಸುತ್ತಾರೆ.

ತಾಯಂದಿರ ಸಮಿತಿ: ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿ ಮಾತ್ರ ಇರುತ್ತದೆ ಆದರೆ ಈ ಶಾಲೆಯಲ್ಲಿ ತಾಯಂದಿರ ಸಮಿತಿಯೊಂದು ರಚನೆಯಾಗಿದೆ, ಈ ಸಮಿತಿಯಲ್ಲಿ 7 ಮಂದಿ ಮಹಿಳೆಯರಿದ್ದು, ಪ್ರತಿ ತಿಂಗಳ ಕೊನೆಯ ಶನಿವಾರ ತಮ್ಮ ಮಕ್ಕಳ ಕಲಿಕಾ ವಿಷಯ ಕುರಿತು ಚರ್ಚೆ ನಡೆಸುತ್ತಾರೆ. ಗ್ರಾಮದಲ್ಲಿ ಆಯ್ದ ಮುಖ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಮೇಲುಸ್ತುವಾರಿ ಸಮಿತಿಯೊಂದಿದ್ದು, ಈ ಸಮಿತಿ ಸದಸ್ಯರು ಸಹ ಶಾಲೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ.

ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುವ ಪೋಷಕರು ಶಾಲೆಯತ್ತ ಮುಖ ಹಾಕುವುದಿಲ್ಲ, ಆದರೆ ಈ ಶಾಲೆಗೆ ಮಕ್ಕಳನ್ನು ಕಳಿಸುವ ಎಲ್ಲಾ ಪೋಷಕರು ಅವರ ಬಿಡುವಿನ ಸಮಯದಲ್ಲಿ ಒಮ್ಮಮ್ಮೆ ಶಾಲೆಗೆ ಭೇಟಿ ನೀಡಿ ಅವರ ಮಕ್ಕಳ ವ್ಯಾಸಂಗದ ಬಗ್ಗೆ ಶಿಕ್ಷಕರೊಂದಿಗೆ ಚರ್ಚೆ ನಡೆಸುತ್ತಾರೆ.

ಈ ಶಾಲೆಗೆ ಬರುವಂತಹ ಶೇ.90ಮಂದಿ ವಿದ್ಯಾರ್ಥಿಗಳ ಪೋಷಕರು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಅದರಲ್ಲೂ ಕಾರ್ಮಿಕರ ಮಕ್ಕಳೇ ಜಾಸ್ತಿ. ಶಾಲಾ ಹಾಜರಾತಿ ಉತ್ತಮವಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗಿದೆ. ನಿತ್ಯ ರೇಡಿಯೋ ಕಾರ್ಯಕ್ರಮ, ದಿನ ಪತ್ರಿಕೆಗಳನ್ನು ಓದಿಸುವುದು, ಅಥ್ಲೆಟಿಕ್ಸ್ ಹಾಗೂ ಇನ್ನಿತರ ಆಟೋಟಗಳಿಗೆ ಒತ್ತು ನೀಡಲಾಗುತ್ತಿದೆ. ಕೆಲವು ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಹಾಗೂ ಇತರ ಕ್ರೀಡಾ ಚಟುವಟಿಕೆಗಳಲ್ಲಿ ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕ ಕೆ.ಎಸ್.ಲಕ್ಷ್ಮೀಶ್ ಅವರು ಶಿಕ್ಷಕ ವೃತ್ತಿಗೆ ಬರುವುದಕ್ಕೂ ಮುನ್ನ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿ ಕೊಂಡಿದ್ದರಿಂದಾಗಿ ಶಾಲೆಯ ಅಭಿವೃದ್ಧಿ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದಾರೆ ಎಂದು ಪೋಷಕರು ಹೇಳುತ್ತಾರೆ.

ಶಾಲೆ ಸಮಗ್ರ ಅಭಿವೃದ್ಧಿ ಹಿಂದೆ ಶಾಲಾಭಿವೃದ್ಧಿ ಸಮಿತಿ, ಮೇಲುಸ್ತುವಾರಿ ಸಮಿತಿ, ತಾಯಂದೀರ ಸಮಿತಿ ಹಾಗೂ ಗ್ರಾಮಸ್ಥರ ಸಲಹೆ ಸಹಕಾರ ಉತ್ತಮವಾಗಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ    ಲಕ್ಷ್ಮೀಶ್.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.