ADVERTISEMENT

ಕಂಡಕ್ಟರ್ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 9:15 IST
Last Updated 23 ಏಪ್ರಿಲ್ 2012, 9:15 IST

ಹಳೇಬೀಡು: ಚಿಕ್ಕಮಗಳೂರಿನಿಂದ ರಾಜನಶಿರಿಯೂರು ಮಾರ್ಗವಾಗಿ ಶನಿವಾರ ರಾತ್ರಿ ಹಳೇಬೀಡಿಗೆ ಬರುತ್ತಿದ್ದ ಬಸ್ಸಿನಲ್ಲಿ ಚಿಲ್ಲರೆ ಕೇಳಿದ ಕಾರಣಕ್ಕೆ ಮಹಿಳೆಯ ತಾಳಿ ಕಸಿದು ಹಲ್ಲೆ ನಡೆಸಿದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಬಸ್ಸು ತಡೆದು ಪ್ರತಿಭಟನೆ ನಡೆಸಿದ ಘಟನೆ ಬಂಡಿಲಕ್ಕನಕೊಪ್ಪಲು ಗ್ರಾಮದಲ್ಲಿ ಭಾನುವಾರ ನಡೆದಿದೆ.

ಬಂಡಿಲಕ್ಕನಕೊಪ್ಪಲು ನಿವಾಸಿ ಜಯಮ್ಮ ಎಂಬವರು ಸಾದರಹಳ್ಳಿ ಯಿಂದ ತಮ್ಮ ಗ್ರಾಮಕ್ಕೆ ಪ್ರಯಾಣ ಮಾಡುತ್ತಿದ್ದಾಗ ಬಸ್ಸಿನ ನಿರ್ವಾಹಕನ ಪರವಾಗಿ ಆತನ ಸಹೋದ್ಯೋಗಿ ಕೆಲಸ ಮುಗಿಸಿಕೊಂಡು ಸ್ನೇಹಿತನಿಗೆ ಸಹಾಯ ಮಾಡುತ್ತಿದ್ದನು. ಜಯಮ್ಮ ತಮ್ಮ ಊರು ಬಂದಾಗ ಇಳಿಯುವಾಗ ತಮಗೆ ಕೊಡಬೇಕಾಗಿದ್ದ ಚಿಲ್ಲರೆ ಕೇಳಿದ್ದಾರೆ. ಆಗ ನಿರ್ವಾಹಕ ಮತ್ತು ಆತನ ಸ್ನೇಹಿತ ಇಬ್ಬರು ಮಹಿಳೆಯನ್ನು ಥಳಿಸಿ, ಮಾಂಗಲ್ಯ ಸರ ಕಸಿದು ಬಸ್ಸಿನಿಂದ ಹೊರಗೆ ತಳ್ಳಿದ್ದಾರೆ ಎನ್ನಲಾಗಿದೆ. ಮಹಿಳೆಗೆ ಕತ್ತಿನ ಭಾಗಕ್ಕೆ ಪೆಟ್ಟು ಬಿದ್ದಿದ್ದು, ನಿರ್ವಾಹಕ ಮತ್ತು ಆತನ ಸ್ನೇಹಿತನ ಹೆಸರು ತಿಳಿದು ಬಂದಿಲ್ಲ.

ಈ ಹಿನ್ನೆಲೆಯಲ್ಲಿ ಭಾನುವಾರ ಅದೇ ಬಸ್ ಗ್ರಾಮದ ಮೂಲಕ ಸಂಚರಿಸು ವಾಗ ಗ್ರಾಮಸ್ಥರು ಬಸ್ ತಡೆದರು. ಸಮಸ್ಯೆ ಬಗೆಹರಿಯುವ ವರೆಗೆ ಬಸ್ಸು ಮುಂದೆ ಹೋಗಲು ಬಿಡುವುದಿಲ್ಲ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸೂಕ್ತವಾದ ತೀರ್ಮಾನ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ಆಗ ಪ್ರಯಾಣಿಕರು ಹಾಗೂ ಗ್ರಾಮದ ಹಿರಿಯರು ಚಿಕ್ಕಮಗಳೂರು ಡಿಪೋ ವ್ಯವಸ್ಥಾಪಕರು ಹಾಗೂ ಪೊಲೀಸ್ ಠಾಣೆಗೆ ದೂರು ನೀಡುವುದು ಸೂಕ್ತ ಎಂದು ತಿಳಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಶೀಘ್ರದಲ್ಲೇ ಕ್ರಮ ಕೈಗೊಳ್ಳದಿದ್ದರೆ ಮತ್ತೊಂದು ದಿನ ಬಸ್ಸು ತಡೆಯಲಾ ಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.