ADVERTISEMENT

ಕಲ್ಯಾಣಿ ಕಲುಷಿತ: ತೆಪ್ಪೋತ್ಸವ ಸ್ಥಗಿತ?

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 5:18 IST
Last Updated 13 ಏಪ್ರಿಲ್ 2013, 5:18 IST

ಬೇಲೂರು: ಇಲ್ಲಿನ ವಿಷ್ಣುಸಮುದ್ರ ಕೆರೆಯ ಕಲ್ಯಾಣಿಯನ್ನು ಸ್ವಚ್ಛಗೊಳಿಸದಿರುವುದರಿಂದ ಈ ಬಾರಿ ರಥೋತ್ಸವದ ಅಂಗವಾಗಿ ನಡೆಸಲಾಗುತ್ತಿದ್ದ ತೆಪ್ಪೋತ್ಸವ ಸ್ಥಗಿತಗೊಳ್ಳುವ ಸಂಭವ ಇದೆ. ಜೊತೆಗೆ ಜಾತ್ರೆಗೆ ಬರುವ ಭಕ್ತರು ಸ್ನಾನಕ್ಕೆ ನೀರಿಲ್ಲದೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚನ್ನಕೇಶವಸ್ವಾಮಿ ರಥೋತ್ಸವದ ಅಂಗವಾಗಿ ಏಪ್ರಿಲ್ 14ರಿಂದ ವಿವಿಧ ಉತ್ಸವಗಳು ಆರಂಭಗೊಳ್ಳಲಿದ್ದು, ಏ.22 ರಂದು ರಥೋತ್ಸವ ನಡೆಯಲಿದೆ.
ರಥೋತ್ಸವಕ್ಕೆ ಬರುವ ಭಕ್ತರ ಅನುಕೂಲಕ್ಕೆ ಸಣ್ಣ ನೀರಾವರಿ ಇಲಾಖೆ ಮತ್ತು ದೇವಾಲಯದ ವ್ಯವಸ್ಥಾಪನಾ ಸಮಿತಿ ಪ್ರತಿ ವರ್ಷ ವಿಷ್ಣುಸಮುದ್ರ ಕೆರೆಯ ಉತ್ತರ ದಿಕ್ಕಿನಲ್ಲಿರುವ ಕಲ್ಯಾಣಿಯನ್ನು ಸ್ವಚ್ಛಗೊಳಿಸಿ ಹೊಸ ನೀರನ್ನು ತುಂಬಿಸುತ್ತದೆ.

ಆದರೆ ಈ ಬಾರಿ ಕಲ್ಯಾಣಿ ಸ್ವಚ್ಛಗೊಳಿಸಿಲ್ಲ. ಕಲ್ಯಾಣಿಯ ನೀರು ಕೊಳೆತು ವಾಸನೆ ಬರುತ್ತಿದೆ. ಭಕ್ತರು ದೇವರಲ್ಲಿ ಹರಕೆ ಮುಡಿ ತೆಗೆಸಿದ ನಂತರ ಕಲ್ಯಾಣಿಯಲ್ಲಿ ಸ್ನಾನ  ಮಾಡಿ ಶುಚಿಯಾಗುವುದು ವಾಡಿಕೆ. ಈ ಬಾರಿ ಕಲ್ಯಾಣಿಯಲ್ಲಿ ನೀರಿಲ್ಲದೆ ಭಕ್ತರು ತೊಂದರೆ ಎದುರಿಸುವಂತಾಗಿದೆ.

ರಥೋತ್ಸವದ ನಂತರ ಕಲ್ಯಾಣಿಯಲ್ಲಿ ಚನ್ನಕೇಶವ ಸ್ವಾಮಿಯ ತೆಪ್ಪೋತ್ಸವ ನಡೆಯಬೇಕಾಗಿದೆ. ಹಲವು ದಶಕಗಳಿಂದ ನಿಂತುಹೋಗಿದ್ದ ತೆಪ್ಪೋತ್ಸವ ಮೂರು ವರ್ಷ ಹಿಂದೆ ಪುನಃ ಆರಂಭವಾಗಿತ್ತು. ಈ ಬಾರಿ ಮತ್ತೆ ಸಮಸ್ಯೆ ಎದುರಾಗಿದೆ.

ಕಲ್ಯಾಣಿಯನ್ನು ಸ್ವಚ್ಛಗೊಳಿಸಿ ನೀರು ತುಂಬಿಸ ಬೇಕಾದ ದೇವಾಲಯದ ಆಡಳಿತ ಮಂಡಳಿಯವರು ಈವರೆಗೆ ಕ್ರಮ ಕೈಗೊಳ್ಳದಿರುವುದು ತೆಪ್ಪೋತ್ಸವದ ಸೇವಾರ್ಥದಾರರು ಮತ್ತು ಭಕ್ತರ ಆಕ್ರೋಶಕ್ಕೂ ಕಾರಣವಾಗಿದೆ. ಜಿಲ್ಲಾಧಿಕಾರಿ ಮತ್ತು ತಾಲ್ಲೂಕು ಆಡಳಿತ, ಸಣ್ಣ ನೀರಾವರಿ ಇಲಾಖೆ ಹಾಗೂ ದೇವಾಲಯದ ವ್ಯವಸ್ಥಾಪನಾ ಸಮಿತಿಯವರು ತುರ್ತಾಗಿ ಗಮನಹರಿಸಿ ಕಲ್ಯಾಣಿಯನ್ನು ಸ್ವಚ್ಛಗೊಳಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.