ADVERTISEMENT

ಕಳ್ಳನ ಬಂಧನ: ರೂ. 13 ಲಕ್ಷ ಮೌಲ್ಯದ ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 9:35 IST
Last Updated 9 ಆಗಸ್ಟ್ 2012, 9:35 IST

ಹಾಸನ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸರಗಳ್ಳತನ ನಡೆಸುತ್ತಿದ್ದ   ಆರೋಪಿಯೊಬ್ಬನನ್ನು ಬಂಧಿಸಿದ ಬಾಣಾವರ ಠಾಣೆ ಪೊಲೀಸರು ಆತನಿಂದ 13.5ಲಕ್ಷ ರೂಪಾಯಿ ಮೌಲ್ಯದ 481 ಗ್ರಾಂ. ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬಂಧಿತ ವ್ಯಕ್ತಿ ಚನ್ನರಾಯಪಟ್ಟಣ ತಾಲ್ಲೂಕು ಎಂ.ಕೆ. ಹೊಸೂರಿನ ದೇವರಾಜು (24) ಎಂಬುವವರಾಗಿದ್ದು, ಜ್ಲ್ಲಿಲೆಯ ವಿವಿಧೆಡೆ ನಡೆದ 14 ಸರಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾದ ವ್ಯಕ್ತಿಯಾಗಿದ್ದ.

ಜಿಲ್ಲೆಯಲ್ಲಿ ಪದೇಪದೇ ಸರಗಳ್ಳತನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷಕ ಎಂ.ವಿ. ಮಲ್ಲಾಪುರೆ ಹಾಗೂ ಬಾಣಾವರ ಠಾಣೆ ಪಿಎಸ್‌ಐ ನಂಜುಂಡೇಗೌಡ ನೇತೃತ್ವದಲ್ಲಿ ಅಪರಾಧ ಪತ್ತೆ ತಂಡವನ್ನು ರಚಿಸಿದ್ದರು.

ಈ ತಂಡ ಮಂಗಳವಾರ (ಆ.7) ಸಂಜೆ 7.15ರ ಸುಮಾರಿಗೆ ಬಾಣಾವರ ಪಟ್ಟಣ ಜಾವಗಲ್ ವೃತ್ತದಲ್ಲಿ ಗಸ್ತಿನಲ್ಲಿದ್ದಾಗ ದೇವರಾಜು ಬೈಕ್‌ನಲ್ಲಿ ಆ ಸ್ಥಳಕ್ಕೆ ಬಂದಿದ್ದ. ಆತನನ್ನು ಪೊಲೀಸರು ತಡೆದರೂ ಬೈಕ್ ನಿಲ್ಲಿಸದೆ ಪರಾರಿಯಾಗಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಹಿಡಿದು ವಿಚಾರಣೆಗೆ            ಒಳಪಡಿಸಿದ್ದರು. ಆಗ ತಾನು ಇನ್ನೊಬ್ಬ ವ್ಯಕ್ತಿಯ ಜತೆ ಸೇರಿ ಸರಗಳ್ಳತನ ನಡೆಸುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಆತ ಬಂದಿದ್ದ ಬೈಕ್ ಸಹ ಬೆಂಗಳೂರಿನಿಂದ ಕದ್ದು ತಂದಿದ್ದಾಗಿತ್ತು ಎಂದು ಪೊಲೀಸರು ತಿಳಿಸಿದರು.

ದೇವರಾಜು ಬಂಧನದಿಂದಾಗಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ         ಹಾಸನದ 11, ಅರಸೀಕೆರೆಯ 2 ಹಾಗೂ ಬಾಣಾವರದ ಒಂದು ಸರಗಳ್ಳತನ ಪ್ರಕರಣಗಳನ್ನು ಭೇದಿಸಿದಂತಾಗಿದೆ. ಈತನೊಂದಿಗೆ ಇದ್ದ ಇನ್ನೊಬ್ಬ ವ್ಯಕ್ತಿಯ          ಪತ್ತೆ ಕಾರ್ಯ ನಡೆಯುತ್ತಿದೆ ಎಂದು ವರಿಷ್ಠಾಧಿಕಾರಿ ಅಮಿತ್ ಸಿಂಗ್ ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಎಂ. ಪ್ರಭಾಕರ, ಅರಸೀಕೆರೆ ಪೊಲೀಸ್ ಉಪ ಅಧೀಕ್ಷಕಿ ಜೆ.ಕೆ. ರಶ್ಮಿ, ಗ್ರಾಮಾಂತರ ವೃತ್ತ ನಿರೀಕ್ಷಕ ಎಂ.ವಿ. ಮಲ್ಲಾಪುರ ಬಾಣಾವರ ಪಿಎಸ್‌ಐ ನಂಜುಂಡೇಗೌಡ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು. ಕಳ್ಳನನ್ನು ಪತ್ತೆ ಮಾಡಿದ ತಂಡಕ್ಕೆ ದಕ್ಷಿಣ ವಲಯ ಐಜಿಪಿ ಎ.ಎಸ್.ಎನ್ ಮೂರ್ತಿ ನಗದು ಬಹುಮಾನ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT