ADVERTISEMENT

ಕಾಡಾನೆ ಉಪಟಳ: ನಾಗರಿಕರ ತಳಮಳ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 8:05 IST
Last Updated 3 ಜನವರಿ 2012, 8:05 IST
ಕಾಡಾನೆ ಉಪಟಳ: ನಾಗರಿಕರ ತಳಮಳ
ಕಾಡಾನೆ ಉಪಟಳ: ನಾಗರಿಕರ ತಳಮಳ   

ಸಕಲೇಶಪುರ: ತಾಲ್ಲೂಕಿನಲ್ಲಿ ಕಾಡಾನೆಗಳ ದಾಳಿಯಿಂದ ಜೀವ ಹಾನಿಯ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಜನರು ಹಗಲು ಹೊತ್ತಿನಲ್ಲಿಯೂ ಸಹ ರಸ್ತೆಗಳಿಗೆ, ತೋಟ ಗದ್ದೆಗಳಿಗೆ ಹೋಗಲು ಭಯ ಪಡುತ್ತಿದ್ದಾರೆ.

ತಾಲ್ಲೂಕಿನ ಬೆಳಗೋಡು ಹೋಬಳಿ ಚಿಕ್ಕನಾಯ ಕನಹಳ್ಳಿ ಗ್ರಾಮದಲ್ಲಿ ಕಳೆದ ಶುಕ್ರವಾರ ರಾತ್ರಿ ತಮ್ಮ ಜಮೀನಿನಿಂದ ಮನೆಗೆ ಮರಳುತ್ತಿದ್ದ ನಿರ್ವಾಣಯ್ಯ (50) ಕಾಡಾನೆ ದಾಳಿಗೆ ಸಿಲುಕಿ ಗಾಯಗೊಂಡಿದ್ದ. ಸತತ 24 ಘಂಟೆಗಳ ಕಾಲ ಆಸ್ಪತ್ರೆಯ ಹಾಸಿಗೆಯಲ್ಲಿ ನೋವಿನಿಂದ ನರಳಿದ ನಂತರ ಜೀವ ಕಳೆದುಕೊಂಡ. ಈ ಘಟನೆ ಜನರನ್ನು ರೊಚ್ಚಿಗೇಳಿಸಿದೆ. ಮೃತದೇಹ ವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಟ್ಟು ಸರ್ಕಾರದ ವಿರುದ್ಧ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ರೈತರು, ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು ಕಾಡಾನೆಗಳಿಗೆ ಸಿಕ್ಕಿ ಮೃತಪಟ್ಟರೂ ಪ್ರತಿ ವರ್ಷ ರೈತರು ಬೆಳೆ  ಕೋಟ್ಯಂತರ ರೂಪಾಯಿ ಬೆಳೆ ಹಾನಿ ಮಾಡುತ್ತಿದ್ದರೂ ಸಹ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹಲವು ದಶಕಗಳಿಂದ ಕಾಫಿ ತೋಟಗಳು ಕಾಡಾನೆಗಳ ಪದೇ ಪದೇ ಆನೆ ದಾಳಿಯಿಂದ ನಾಶವಾಗುತ್ತಿವೆ. ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿದರೆ, ಕಾಡಾನೆಗಳು ಕಾಡು ಬಿಟ್ಟು ನಾಡಿಗೆ ಬರುತ್ತಿರುವುದಕ್ಕೆ ಕಾರಣ ಹುಡುಕುವುದು ಬೇಡ, 25 ಕಾಡಾನೆಗಳನ್ನು 3 ತಿಂಗಳ ಒಳಗೆ ಸ್ಥಳಾಂತರ ಮಾಡುತ್ತೇವೆ ಎಂದು ರಾಜ್ಯ ಅರಣ್ಯ ಸಚಿವರು ಸುಳ್ಳು ಹೇಳಿಕೆ ನೀಡುತ್ತಾರೆ. ರೈತರು, ಕಾರ್ಮಿಕರು ಗ್ರಾಮೀಣ ಪ್ರದೇಶದ ಜನರ ಜೀವದ ಜತೆ ಸರ್ಕಾರ ಚೆಲ್ಲಾಟ ಆಡುತ್ತಿದೆ ಎಂದು ಆನೆ ಸಮಸ್ಯೆಯಿಂದ ಸಾಕಷ್ಟು ನೊಂದಿರುವ ತಾಲ್ಲೂಕಿನ ಕೊತ್ನಹಳ್ಳಿ ತಮ್ಮಣ್ಣಗೌಡ `ಪ್ರಜಾವಾಣಿ~ಗೆ ಹೇಳಿದರು.

ತಾಲ್ಲೂಕಿನ ಐಗೂರು, ಮಾಗಲು, ಯಸಳೂರು, ಬಿಸಿಲೆ, ಹೆಗ್ಗದ್ದೆ ಸೇರಿದಂತೆ ಕಳೆದ 10 ವರ್ಷಗಳಿಂದ ಈಚೆಗೆ ತಾಲ್ಲೂಕಿನಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಕಾಡಾನೆಗಳ ದಾಳಿಯಿಂದ ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಮಂದಿ ಆನೆ ದಾಳಿಗೆ ಸಿಕ್ಕಿ ಅಂಗವಿಕಲರಾಗಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಕಾಡಾನೆಗಳು, ಕಾಡು ಬಿಟ್ಟು ರೈತರ ತೋಟ ಗದ್ದೆಗ ಳಲ್ಲಿಯೇ ಬೀಡು ಬಿಟ್ಟಿರುವುದರಿಂದ ಶೇ.80ಕ್ಕೂ ಹೆಚ್ಚು ಗ್ರಾಮಗಳು ಕಾಡಾನೆ ದಾಳಿಗೆ ತುತ್ತಾಗಿವೆ.

ಜಲ ವಿದ್ಯುತ್ ಯೋಜನೆಗಳು ಕಾರಣ: ತಾಲ್ಲೂಕಿನ ಪಶ್ಚಿಮಘಟ್ಟದ ರಕ್ಷಿತ ಅರಣ್ಯಗಳನ್ನು ನಾಶಗೊಳಿಸಿ, ಜಲ ವಿದ್ಯುತ್ ಯೋಜನೆಗಳು ಹುಟ್ಟಿಕೊಂಡ ನಂತರದ ದಿನಗಳಿಂದ ಆನೆ ಸಮಸ್ಯೆ ಉಂಟಾಗಿದೆ. ಕೆಂಪು ಹೊಳೆ ಜಲ ವಿದ್ಯುತ್, ಪಶ್ಚಿಮ್ ಹೈಡ್ರೋ ಎನರ್ಜಿ, ಪಶ್ಚಿಮ್ ಹೈಡ್ರೋ ಭಾಗ 2, ನಾಗಾರ್ಜುನ್ ಹೈಡ್ರೋ,  ಮಾರುತಿ ಪವರ್ ಜೆನ್ (ಇಂಡಿಯಾ), ಮಾರುತಿ ಪವರ್ ಜೆನ್(ಇಂಡಿಯಾ) ಮುಂತಾದ ಹತ್ತಾರು ಜಲ ವಿದ್ಯುತ್ ಯೋಜನೆ ಗಳಿಂದ ಈಗಾಗಲೇ ಜಿಲ್ಲೆಯ ಶೇ.20ಕ್ಕೂ ಹೆಚ್ಚು ಪ್ರಮಾಣದ ಅರಣ್ಯ ನಾಶಗೊಂಡಿದೆ. ಅಲ್ಲದೆ ಅರಣ್ಯ ದಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳು, ಚೆಕ್ ಡ್ಯಾಂಗಳು, ವಿದ್ಯುತ್ ಮಾರ್ಗ, ರಸ್ತೆ ನಿರ್ಮಾಣ, ಸುರಂಗಗಳ ನಿರ್ಮಾಣಗಳಿಂದ ವನ್ಯ ಜೀವಿಗಳು ಗ್ರಾಮೀಣ ಪ್ರದೇಶಗಳಿಗೆ ನುಗ್ಗಿ ಪ್ರಾಣ ಹಾನಿ, ಬೆಳೆ ಹಾನಿ ಮಾಡುತ್ತಿವೆ. ಈ ಎಲ್ಲ ಯೋಜನೆಗಳನ್ನು ಕಾಡಿನಿಂದ ಹೊರ ದಬ್ಬಬೇಕು ಎಂದು ಪ್ರಗತಿಪರ ರೈತ ಯಡೇಹಳ್ಳಿ ವೈ.ಸಿ. ರುದ್ರಪ್ಪ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.