ADVERTISEMENT

ಕಾಮಗಾರಿ ಕೈಗೊಳ್ಳಲು ಹಿಂದೇಟು: ಶಾಸಕ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 5:45 IST
Last Updated 22 ಅಕ್ಟೋಬರ್ 2011, 5:45 IST

ಸಕಲೇಶಪುರ: ತಾಲ್ಲೂಕಿನ ಮಾವಿನಹಳ್ಳಿ ದಬ್ಬೇಗದ್ದೆ ರಸ್ತೆ ಡಾಂಬರೀಕರಣಕ್ಕೆ ಆರು ಬಾರಿ ಟೆಂಡರ್ ಕರೆದರೂ, ಕಾಮಗಾರಿ ನಿರ್ವಹಿಸಲು  ಯಾವುದೇ ಗುತ್ತಿಗೆದಾರರು ಬರುತ್ತಿಲ್ಲ ಎಂದು ಶಾಸಕ ಕುಮಾರಸ್ವಾಮಿ ಬುಧವಾರ ಹೇಳಿದರು.

ತಾ.ಪಂ. ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹೇಮಾವತಿ ನದಿಯಿಂದ ಅಧಿಕ ತೂಕ ಹೊತ್ತು, ಮರಳು ಸಾಗಣೆ ಮಾಡುವ ಲಾರಿಗಳಿಂದ ಮೂರು ವರ್ಷಗಳ ಹಿಂದೆ ಮಾಡಲಾ ಗಿದ್ದ ಡಾಂಬರ್ ರಸ್ತೆ ಸಂಪೂರ್ಣ ಗುಂಡಿ ಬಿದ್ದು ಭಾರೀ ಆಳವಾದ ಹೊಂಡಗಳು ನಿರ್ಮಾಣ ಆಗಿವೆ.
 
ಹೊಳೆಯಿಂದ ಮರಳು ಬಗೆದು ಸಾಗಣೆ ಮಾಡುವುದರಿಂದ ರಸ್ತೆಯ ಮೇಲೆ ನೀರು ಸುರಿಯುತ್ತದೆ. ಆ ಕಾರಣದಿಂದ ಯಾವುದೇ ಗುತ್ತಿಗೆದಾ ರರು ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಲು ಮುಂದೆ ಬರದೆ ಸಮಸ್ಯೆ ಉಂಟಾಗಿದೆ ಎಂದರು.

ಮೂರು ವರ್ಷಗಳಿಂದ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿಗೆ 10 ಲಕ್ಷ ರೂಪಾಯಿ ಹಣ ಇದುವರೆಗೂ ಬಿಡುಗಡೆಯಾಗಿಲ್ಲ. ಮಳೆ ಹಾನಿಯಿಂದ ಉಂಟಾದ ನಷ್ಟಕ್ಕೆ 8 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕಳೆದ ವರ್ಷ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ನೆನೆಗುದಿಗೆ ಬಿದ್ದಿದೆ. ರಾಜ್ಯ ಬಿಜೆಪಿ ಸರ್ಕಾರ ತಾಲ್ಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆ ಸರಿಯಾಗಿ ಹಣ ಬಿಡುಗಡೆ ಮಾಡದೆ ಮಲತಾಯಿ ಧೋರಣೆ ಅನುಸರಿಸುತ್ತಾ ಬಂದಿದೆ ಎಂದು ಆರೋಪಿಸಿದರು.

ತಾಲ್ಲೂಕಿನ 16 ಸರ್ಕಾರಿ ಶಾಲೆಗಳ ಜಾಗವನ್ನು ಒತ್ತುವರಿ ಮಾಡಲಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ನೆರವಿನಿಂದ ಒತ್ತುವರಿ ಭೂಮಿಯನ್ನು ಶೀಘ್ರದಲ್ಲಿ ತೆರವುಗೊಳಿಸುವಂತೆ ತಹಶಿಲ್ದಾರ್ ಚಂದ್ರಮ್ಮ ಅವರಿಗೆ ಸೂಚಿಸಿದರು.

ಬ್ಯಾಕರವಳ್ಳಿ ಗ್ರಾಮದಲ್ಲಿ ಗುದ್ದಲಿ ಪೂಜೆ ನಡೆಸಿ ಆರು ತಿಂಗಳು ಕಳೆದರೂ ಸಹ, ಮೊರಾರ್ಜಿ ವಸತಿ ಶಾಲೆ ಕಟ್ಟಡ ಕಾಮಗಾರಿ ಆರಂಭ ಮಾಡಲು ಕೆಲವು ತೊಡಕುಗಳಿವೆ ಎಂದೇ ಹೇಳುತ್ತಿರುವುದು ಸರಿಯಲ್ಲ. ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಿ ಕಾಮಗಾರಿ ಪ್ರಾರಂಭಗೊಳಿಸಬೇಕು ಎಂದರು.

ತಾಲ್ಲೂಕಿನ 29 ಶಾಲೆಗಳಲ್ಲಿ ಒಟ್ಟು 55 ಸಿಲಿಂಡರ್‌ಗಳು ಕಳುವಾಗಿದ್ದು, ಇದುವರೆಗೂ ಕಳವಾಗಿರುವ ಒಂದೇ ಒಂದು ಸಿಲಿಂಡರ್ ಪತ್ತೆ ಹಚ್ಚುವ ಕೆಲಸವನ್ನು ಪೊಲೀಸ್ ಇಲಾಖೆಯಿಂದ ಆಗಿಲ್ಲ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಲಕ್ಷ್ಮಣ ಬಳೂಟಗಿ ಸಭೆಯಲ್ಲಿ ಆರೋಪಿಸಿದರು.

ಸಭೆಯಲ್ಲಿ ಜಿ..ಪಂ. ಉಪಾಧ್ಯಕ್ಷೆ ಸುಲೋಚನಾ ರಾಮಕೃಷ್ಣ, ತಾ.ಪಂ ಅಧ್ಯಕ್ಷೆ ಎಸ್.ಎಸ್. ವೇದಾವತಿ, ಜಿ.ಪಂ. ಸದಸ್ಯೆ ಮಂಜಮ್ಮ ತಿಪ್ಪೆಸ್ವಾಮಿ, ತಹಶೀಲ್ದಾರ್ ಚಂದ್ರಮ್ಮ,  ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.