ADVERTISEMENT

ಕಾರುಗಳು ಜಖಂ:10 ಮಂದಿ ವಶ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 5:55 IST
Last Updated 7 ಜುಲೈ 2012, 5:55 IST

ಹಾಸನ: ಮನೆಯಲ್ಲಿ ಶೆಡ್ ಇಲ್ಲದೆ ಗೇಟಿನಿಂದಾಚೆ, ರಸ್ತೆಬದಿ ತಮ್ಮ ಕಾರುಗಳನ್ನು ನಿಲ್ಲಿಸಿದ್ದ ಅನೇಕ ಮಾಲೀಕರಿಗೆ ಶುಕ್ರವಾರ ಮುಂಜಾನೆ ತಮ್ಮ ವಾಹನ ನೋಡಿದಾಗ ಆಘಾತವಾಗಿತ್ತು. ರಾತ್ರಿ ವೇಳೆಯಲ್ಲಿ ಯಾರೋ ಕಿಡಿಗೇಡಿಗಳ ಕಾರುಗಳ ಗಾಜುಗಳನ್ನು ಒಡೆದು ಹೋಗಿದ್ದರು.

 ನಗರದ ಕೆ.ಆರ್ ಪುರಂ, ಪೆನ್ಶನ್ ಮೊಹಲ್ಲಾ ಹೇಮಾವತಿ ನಗರ ಮುಂತಾದ ಕೆಲವು ಬಡಾವಣೆಗಳಲ್ಲಿ ಯಾರೋ ಕೆಲವು ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ಸುಮಾರು 40 ಕಾರುಗಳ ಗಾಜುಗಳನ್ನು ಕಿಡಿಗೇಡಿಗಳು ಒಡೆದಿದ್ದಾರೆ.

ರಾತ್ರಿ ಸುಮಾರು 1.30ರ ಬಳಿಕ ಘಟನೆ ನಡೆದಿತ್ತು. ಬಡಾವಣೆ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲೂ ಕೆಲವು ಕಾರುಗಳನ್ನು ಪುಡಿ ಮಾಡಲಾಗಿದೆ. ಗಾಜು ಒಡೆದ ಶಬ್ದ ಕೇಳಿ ಮಾಲೀಕರು ಹೊರಗೆ ಬಂದು ನೋಡುವಷ್ಟರಲ್ಲೇ ಕಿಡಿಗೇಡಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಈ ನಡುವೆ ಕೆಲವು ಮಾಲೀಕರು ಬೈಕ್‌ನ ನಂಬರ್ ನೋಡಿದರೆ ಇನ್ನೂ ಒಂದಿಬ್ಬರು ಘಟನೆ ನಡೆದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲವರಿಗೆ ಬೆಳಿಗ್ಗೆ ಎದ್ದು ಕಾರಿನ ಬಳಿಗೆ ಹೋದಾಗಲೇ ವಿಷಯ ತಿಳಿದಿದೆ.

ಕಾರಿನ ಮಾಲೀಕರು ರಾತ್ರಿಯಲ್ಲಿ ಕರೆ ಮಾಡಿ ಮಾಹಿತಿ ನೀಡಿದ್ದರಿಂದ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಕಿಡಿಗೇಡಿಗ ಳನ್ನು ಬೆನ್ನಟ್ಟಿ 10 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಶುಕ್ರವಾರ ಒಬ್ಬರ ನಂತರ ಒಬ್ಬರಂತೆ ಹತ್ತಾರು ವಾಹನಗಳ ಮಾಲೀಕರು ಬಡಾವಣೆ ಠಾಣೆಗೆ ಕಾರಿನೊಂದಿಗೆ ಬಂದು ದೂರು ನೀಡಿದ್ದಾರೆ. ಮೊದಲು ದೂರು ನೀಡಿದ ಮಾಲೀಕರು ಬಳಿಕ ಅಲ್ಲಿಂದ ತಮ್ಮ ಹಾನಿಯಾಗಿರುವ ಕಾರುಗಳಲ್ಲೇ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದರು. ಎಸ್‌ಪಿ ಅಮಿತ್ ಸಿಂಗ್ ಅವರನ್ನು ಭೇಟಿಮಾಡಿ ತಪ್ಪಿತಸ್ಥರನ್ನು ಬಂಧಿಸಿ ನಮಗೆ ಪರಿಹಾರ ಕೊಡೊಸಬೇಕು ಎಂದು ಒತ್ತಾಯಿಸಿ ಸ್ವಲ್ಪ ಕಾಲ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಈ ಹಿಂದೆಯೂ ಒಂದೆರಡು ಬಾರಿ ಇಂಥ ಘಟನೆಗಳು ನಡೆದಿವೆ. ಅಂದು ಪೊಲೀಸರು ಸುಮ್ಮನಿದ್ದ ಕಾರಣ ಈ ಬಾರಿ ಅತಿ ಹೆಚ್ಚು ಕಾರುಗಳಿಗೆ ಹಾನಿಯಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯ ಸುರೇಶ್‌ಕುಮಾರ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.