ADVERTISEMENT

ಕುಡಿಯುವ ನೀರು: ಹಣ ಬಿಡುಗಡೆಗೆ 15ದಿನ ಗಡುವು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 5:50 IST
Last Updated 19 ಫೆಬ್ರುವರಿ 2011, 5:50 IST

ಹಾಸನ: ಮುಂದಿನ ಹದಿನೈದು ದಿನದೊಳಗೆ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳಿಗೆ ಹಣ ಬಿಡುಗಡೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ನಡೆಸಲು, ಅಗತ್ಯವೆನಿಸಿದರೆ ಉಪವಾಸ ಸತ್ಯಾಗ್ರಹ ಆರಂಭಿಸಲು ಶುಕ್ರವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ ಮಾಜಿ ಪ್ರಧಾನಿ, ಸಂಸದ ಎಚ್.ಡಿ. ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರ ವಿವಿಧ ಯೋಜನೆಗಳಿಗೆ ನೀಡುವ ಹಣವನ್ನು ರಾಜ್ಯ ಬೇರೆ ಯೋಜನೆಗಳಿಗೆ ಬಳಕೆ ಮಾಡುತ್ತಿರುವ ಬಗ್ಗೆ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದರು.

‘ಕೆಲವು ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇಂಥ ಕಡೆ ಕೊಳವೆ ಬಾವಿ ಕೊರೆಸಲು ಕ್ರಮ ಕೈಗೊಂಡಿಲ್ಲ. ಉಸ್ತುವಾರಿ ಸಚಿವರು ಒಂದು ಕೆಡಿಪಿ ಸಭೆಯನ್ನೂ ನಡೆಸಿಲ್ಲ. ನಮ್ಮ ಮಾತಿಗೂ ಬೆಲೆ ಇಲ್ಲ. ಶಾಸಕರೆಂದರೆ ಗುಲಾಮರೆಂದು ತಿಳಿದಿದ್ದಾರೆಯೇ ?’ ಎಂದು ಮಾಜಿ ಸಚಿವ ರೇವಣ್ಣ ಪ್ರಶ್ನಿಸಿದರು. ಸಭೆಯಲ್ಲಿದ್ದ ಇತರ ಶಾಸಕರೂ ಸಹ ಕುಡಿಯುವ ನೀರಿಗೆ ಸರ್ಕಾರ ಹಣ ಬಿಡುಗಡೆ ಮಾಡದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕೊನೆಯಲ್ಲಿ ಮಾತನಾಡಿದ ದೇವೇಗೌಡರು, ‘ಏರು ದನಿಯಲ್ಲಿ ಮಾತನಾಡುವುದರಿಂದ, ಅಧಿಕಾರಿಗಳನ್ನು ಗದರಿಸುವುದರಿಂದ ಪ್ರಯೋಜನವಿಲ್ಲ. 15ದಿನದೊಳಗೆ ಹಣಬಿಡುಗಡೆಗೊಳಿಸದಿದ್ದರೆ ಹೋರಾಟ ಆರಂಭಿಸುವ ಠರಾವು ಅಂಗೀಕರಿಸಿ ಕಳಿಸೋಣ. ಬೀದಿಗಿಳಿದು ಹೋರಾಟ ಮಾಡೋಣ. ನಾನೇ ನೇತೃತ್ವ ವಹಿಸುತ್ತೇನೆ. ಅಗತ್ಯವೆನಿಸಿದರೆ ಉಪವಾಸ ಸತ್ಯಾಗ್ರಹವನ್ನೂ ಆರಂಭಿಸೋಣ. ನನಗೇನಾದರೂ ಆದರೆ ಈ ಜಿಲ್ಲೆಯ ಜನ ಎದ್ದು ನಿಲ್ಲುತ್ತಾರೆ. ಆಗ ಸರ್ಕಾರಕ್ಕೆ ಬುದ್ಧಿ ಬರುತ್ತದೆ’ ಎಂದರು.

ಜವಾಬ್ದಾರಿ ನಿರ್ವಹಿಸಿ:ಸಭೆಯಲ್ಲಿದ್ದ ಜನಪ್ರತಿನಿಧಿಗಳು ಮತ್ತೆ ಮತ್ತೆ ಕೊಳವೆ ಬಾವಿ ಬಗ್ಗೆ ಮಾತನಾಡಿದಾಗ ಅವರನ್ನು ತಡೆದ ದೇವೇಗೌಡರು, ‘ಅಧಿಕಾರಿಗಳು ನೀಡಿದ ವರದಿ ಆಧಾರದಲ್ಲಿ ಯೋಜನೆಗಳು ರೂಪುಗೊಳ್ಳುತ್ತವೆ. ಅವರು ಊರಿಗೆ ಬಂದಾಗ ವಸ್ತುಸ್ಥಿತಿ ತಿಳಿಸುವ ಜವಾಬ್ದಾರಿ ಜನಪ್ರತಿನಿಧಿಗಳದ್ದು. ಅದನ್ನು ಸರಿಯಾಗಿ ನಿರ್ವಹಿಸದಿದ್ದರೆ ಯಾವ ಪುರುಷಾರ್ಥಕ್ಕೆ ಜಿ.ಪಂ, ತಾ.ಪಂ. ಸದಸ್ಯರು ಅಥವಾ ಶಾಸಕರಾಗಬೇಕು ?’ ಎಂದು ಪ್ರಶ್ನಿಸಿದರು.

ಬಡವರಿಗಿಲ್ಲ ಸಾಲ: ಲೀಡ್ ಬ್ಯಾಂಕ್‌ನ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ ಬ್ಯಾಂಕ್ ವ್ಯವಸ್ಥಾಪಕ ಹೊಸಮಠ, ‘ಈ ವರ್ಷದಿಂದ ಜಾರಿಯಾಗುವಂತೆ ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ, ಬ್ಯಾಂಕ್ ಶಾಖೆ ಇಲ್ಲದ ಹಳ್ಳಿಗಳಲ್ಲಿ ‘ವ್ಯಾಪಾರ ಪ್ರತಿನಿಧಿ’ ನೇಮಕ ಮಾಡುವ ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಇಂಥ 66 ಹಳ್ಳಿಗಳಿವೆ. ಕೆಲವೆಡೆ ಈಗಾಗಲೇ ಪ್ರತಿನಿಧಿಗಳನ್ನು ನೇಮಕ ಮಾಡಲಾಗಿದೆ. ಉಳಿದಿರುವ 32 ಹಳ್ಳಿಗಳಲ್ಲಿ ಮಾರ್ಚ್ ಅಂತ್ಯದೊಳಗೆ ನೇಮಕ ಮಾಡಲಾಗುವುದು’ ಎಂದರು.

ಆದರೆ ಬ್ಯಾಂಕ್‌ಗಳ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ‘ಬಡ ರೈತರಿಗೆ, ವಿದ್ಯಾರ್ಥಿಗಳಿಗೆ ಸಾಲ ನೀಡಲು ಬ್ಯಾಂಕ್‌ಗಳಿಗೆ ಗುರಿ ನಿಗದಿಗೊಳಿಸಿದೆ. ಆದರೆ ಕೆಲವು ಬ್ಯಾಂಕ್‌ಗಳು ಬಡವರಿಗೆ ಸಾಲ ನೀಡಿಲ್ಲ. ಯೋಜನೆಗಳೆಲ್ಲ ಉಳ್ಳವರ ಪಾಲಾಗುತ್ತಿವೆ ಎಂದು ದೂರಿದರು.

‘ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದವರು ನೀಡುವ ವಿವಿಧ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಬ್ಯಾಂಕ್‌ನವರೇ ಆಯ್ಕೆಮಾಡುವ ವ್ಯಕ್ತಿಗಳಿಗೆ ಶಾಸಕರು ಯೋಜನೆಯನ್ನು ಮಂಜೂರು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಯೋಜನೆಗಳು ಸರಿಯಾಗಿ ಅನುಷ್ಠಾನವಾಗದೆ ಸಾವಿರಾರು ರೂಪಾಯಿ ಸಬ್ಸಿಡಿ ಹಣ ವಾಪಸ್ ಹೋಗುತ್ತಿದೆ ಎಂದು ಶಾಸಕ ಶಿವಲಿಂಗೇ ಗೌಡ ನುಡಿದರು.

‘ಈ ಬಗ್ಗೆ ಶೀಘ್ರದಲ್ಲೇ ಸಭೆ ಕರೆದು ಯಾವ್ಯಾವ ಯೋಜನೆಗಳು ಅನುಷ್ಠಾನವಾಗಿಲ್ಲ, ಅದಕ್ಕೆ ಕಾರಣವೇನು? ಎಂಬುದನ್ನು ಪರಿಶೀಲಿಸಬೇಕು, ಯೋಜನೆಯಲ್ಲೇ ಕುಂದು ಕೊರತೆಗಳಿದ್ದಲ್ಲಿ ಅದರ ಬಗ್ಗೆ ವಿಸ್ತ್ರತ ಮಾಹಿತಿಯನ್ನು ಶಾಸಕರು ಹಾಗೂ ತಮಗೆ ನೀಡಬೇಕು. ಹಾಗೇನಾದರೂ ಇದ್ದಲ್ಲಿ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚಿಸುವೆ’ ಎಂದು ದೇವೇಗೌಡರು ನುಡಿದರು.

ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಇನ್ನೂ ನಿಂತಿಲ್ಲ, ಆದ್ದರಿಂದ ವಿದರ್ಭ ಪ್ಯಾಕೇಜನ್ನು ಮುಂದುವರಿಸುವಂತೆ ಕೇಂದ್ರವನ್ನು ಒತ್ತಾಯಿಸಬೇಕೆಂದು ರೇವಣ್ಣ ಆಗ್ರಹಿಸಿದರು.

ಉದ್ಯೋಗ ಖಾತ್ರಿ ಯೋಜನೆ ಹಲವು ಗೊಂದಲಗಳಿಂದ ಕೂಡಿದ್ದು, ಅದು ಕಾರ್ಯಸಾಧುವಲ್ಲ. ಇದರಲ್ಲಿ ರಾಜಕೀಯ ಬೆರೆಸಲು ಹೋದರೆ ಅಧಿಕಾರಿಗಳು ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದರು.

ವಿವಿಧ ರಾಜ್ಯಗಳಲ್ಲಿ ಈ ಯೋಜನೆಯಲ್ಲಿ ಸಾವಿರಾರು ಕೋಟಿ ರೂಪಾಯಿ ದುರ್ವ್ಯಯವಾಗಿರುವುದು ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲೂ ಅಂಥ ಉದಾಹರಣೆ ಇದೆ. ಉಸ್ತುವಾರಿ ಸಚಿವರು ಯೋಜನೆಯಲ್ಲಿ ರಾಜಕೀಯ ಬೆರೆಸಲು ಮುಂದಾಗಿದ್ದಾರೆ. ಅವರಿಗೆ ಸಾಥ್ ನೀಡಿದರೆ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

ಇಂದಿರಾ ಆವಾಸ್ ಯೋಜನೆಯೂ ಸಮರ್ಪಕವಾಗಿ ಜಾರಿಯಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ದೇವೇಗೌಡರು ಈ ಯೋಜನೆಯಡಿ ಪ್ರತಿ ಮನೆಯ ವೆಚ್ಚವನ್ನು 35 ಸಾವಿರದಿಂದ ಕನಿಷ್ಠ 60 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸುವಂತೆ ನಿರ್ಣಯ ಕೈಗೊಳ್ಳಲು ಸೂಚಿಸಿದರು. ಲೋಕೋಪಯೋಗಿ ಇಲಾಖೆಯ ವಿವಿಧ ಯೋಜನೆಗಳಿಗೆ ಕೇಂದ್ರದಿಂದ ಬಂದಿರುವ ಹಣ ಎಲ್ಲಿ ವ್ಯಯವಾಗಿದೆ ಎಂದು ತಿಳಿಯಲು ಮಾಹಿತಿ ಹಕ್ಕು ಕಾಯ್ದೆ ಯಡಿ ಅರ್ಜಿಸಲ್ಲಿಸುವಂತೆ ಪಕ್ಷದ ಶಾಸಕರಿಗೆ ಸೂಚಿಸಿದರು.

ಶಾಸಕ ಪುಟ್ಟೇಗೌಡ, ಎಚ್.ಕೆ. ಕುಮಾರಸ್ವಾಮಿ, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ಜಿ.ಪಂ. ಅಧ್ಯಕ್ಷ ಚಂದ್ರೇಗೌಡ, ಉಪಾಧ್ಯಕ್ಷೆ ಪಾರ್ವತಮ್ಮ ನಂಜುಂಡಾಚಾರ್, ಜಿಲ್ಲಾಧಿಕಾರಿ ನವೀನ್‌ರಾಜ್ ಸಿಂಗ್, ಜಿಪಂ ಸಿಇಓ ಎಸ್.ಟಿ. ಅಂಜನ್ ಕುಮಾರ್, ಎಸ್‌ಪಿ ಕೆ.ವಿ. ಶರತ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.


ಸ್ವರಾಜ್ ಬೋಗಸ್: ಗ್ರಾಮ ಸ್ವರಾಜ್ ಯೋಜನೆಯಡಿ ಬರಿಯ ಬೋಗಸ್ ನಡೆಯುತ್ತಿದೆ. ಹಲವು ಸ್ವಸಹಾಯ ಸಂಘಗಳು ಜನಪ್ರತಿನಿಧಿಗಳ ಹಾದಿತಪ್ಪಿಸುತ್ತಿವೆ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಆರೋಪಿಸಿದರು.

ಈ ಯೋಜನೆ ಉತ್ತಮವಾಗಿ ಜಾರಿಗೊಳ್ಳುತ್ತಿದೆ ಎಂದು ಅಧಿಕಾರಿಗಳು ನುಡಿದಾಗ ಅವರು ಈ ಪ್ರತಿಕ್ರಿಯೆ ನೀಡಿದರು. ‘ಬ್ರೆಡ್, ಕೇಕ್, ಕ್ಯಾಂಡಲ್... ಹೀಗೆ ನೇನೇನೋ ತಯಾರಿಸುತ್ತೇವೆ ಎಂದು ಸಾಲ ಪಡೀತಾರೆ. ಆಗಾಗ ಪ್ರದರ್ಶನ ಏರ್ಪಡಿಸಿ ಹೋಟೆಲ್, ಬೇಕರಿಯಿಂದ ಸಾಮಗ್ರಿ ತಂದಿಟ್ಟು ನಮ್ಮ ಕೈಗಳಿಂದ ಉದ್ಘಾಟನೆ ಮಾಡಿಸುತ್ತಾರೆ. ವಾಸ್ತವವಾಗಿ ಮಹಿಳೆಯರು ಸಬಲರಾಗಿಲ್ಲ, ಅವರು ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಈ ಯೋಜನೆಯಿಂದ ಅಡುಗೆ ಮನೆಯಲ್ಲಿರಬೇಕಾದ ಮಹಿಳೆಯರು ವ್ಯಾನಿಟಿ ಬ್ಯಾಗ್ ಹಾಕಿ ತಿರುಗಾಡುವಂತಾಗಿದೆ’ ಎಂದರು.

ಅಧಿಕಾರ ನೀಡಿ: ‘ಬ್ಯಾಂಕ್‌ಗಳು ನೇರವಾಗಿ ಕೇಂದ್ರದ ಅಧೀನದಲ್ಲಿರುತ್ತವೆ. ಒಂದುವೇಳೆ ಅವರು ಯೋಜನೆಗಳನ್ನು ಜಾರಿಮಾಡದಿದ್ದರೂ ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುವ ಸ್ಥಿತಿಯಲ್ಲಿಲ್ಲ. ಅವರನ್ನು ನಮ್ಮ ವ್ಯಾಪ್ತಿಯಲ್ಲಿ ಬರುವಂತೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ನವೀನ್‌ರಾಜ್ ಸಿಂಗ್  ದೇವೇಗೌಡರಿಗೆ ಮನವಿ ಮಾಡಿದರು.
ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ವಿಫಲವಾಗಿರುವ ಬ್ಯಾಂಕ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದಾಗ ಅವರು ಈ ಮಾತನಾಡಿದರು.

‘ಸಭೆಯಲ್ಲಿ ಕುಳಿತು ಸಲಹೆ ಸೂಚನೆ ನೀಡುವಷ್ಟಕ್ಕೆ ನಮ್ಮ ಅಧಿಕಾರ ಸೀಮಿತವಾಗುತ್ತದೆ. ಸರಿಯಾಗಿ ಕೆಲಸ ವಾಗುತ್ತಿಲ್ಲ ಎಂದು ತಿಳಿದಿದ್ದರೂ ನಾವೇನೂ ಮಾಡುವಂತಿಲ್ಲ. ಅವರೂ ನಮ್ಮ ವ್ಯಾಪ್ತಿಯಲ್ಲಿ ಬಂದರೆ ಫಲಾನುಭವಿಗಳಿಗೆ ಲಾಭವಾಗುವಂತೆ ಮಾಡಬಹುದು’ ಎಂದರು.

ಯೋಜನೆಗಳನ್ನು ಸರಿಯಾಗಿ ಜಾರಿಮಾಡದ ಬ್ಯಾಂಕ್‌ಗಳ ವ್ಯವಸ್ಥಾಪಕರ ವಿರುದ್ಧ ಆರ್‌ಬಿಐಗೆ ದೂರು ನೀಡುವಂತೆ ಸಭೆಯಲ್ಲಿ ಸೂಚನೆ ನೀಡಲಾಯಿತು.

32 ರೈತರ ಆತ್ಮಹತ್ಯೆ: ‘2010-11ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 32 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

ಈ ವರೆಗೆ ಕೇವಲ ಮೂವರಿಗೆ ಪರಿಹಾರ ನೀಡಲಾಗಿದೆ. 32ರಲ್ಲಿ 12 ರೈತರ ಪ್ರಕರಣಗಳನ್ನು ವಿವಿಧ ಕಾರಣಗಳಿಗಾಗಿ ತಿರಸ್ಕರಿಸಲಾಗಿದೆ. ಉಳಿದ 12 ಮಂದಿಯ ಕುಟುಂಬದವರಿಗೆ ಇನ್ನೂ ಪರಿಹಾರ ನೀಡಿಲ್ಲ ಎಂದರು.

ಪರಿಹಾರ ವಿತರಣೆಯಾಗಬೇಕಾದವರ ಪೂರ್ಣ ವಿವರಗಳೊಂದಿಗೆ ಸೋಮವಾರವೇ ತಮ್ಮ ಕಚೇರಿಗೆ ಬರುವಂತೆ ಜಿಲ್ಲಾಧಿಕಾರಿ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಪ್ರಸಕ್ತ ಸಾಲಿನಲ್ಲಿ ಹೊಳೆನರಸೀಪುರದಲ್ಲಿ 1, ಬೇಲೂರಿನಲ್ಲಿ 3, ಹಾಸನದಲ್ಲಿ 6, ಅರಸೀಕೆರೆಯಲ್ಲಿ 8, ಅರಕಲಗೂಡಿನಲ್ಲಿ 5 ಸಕಲೇಶಪುರದಲ್ಲಿ 8 ಹಾಗೂ ಆಲೂರು ತಾಲ್ಲೂಕಿನಲ್ಲಿ ಒಬ್ಬ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.