ADVERTISEMENT

ಕೆಲಸ ಮಾಡದಿದ್ದರೆ ಲೋಕಾಯುಕ್ತರಿಗೆ ದೂರು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 9:40 IST
Last Updated 13 ಫೆಬ್ರುವರಿ 2011, 9:40 IST

ಹೊಳೆನರಸೀಪುರ: ವಿವಿಧ ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿಗೆ ಬೇಸತ್ತ ಶಾಸಕ ಎಚ್.ಡಿ. ರೇವಣ್ಣ ‘ನಿಮ್ಮ ವಿರುದ್ಧ ನಾನೇ ಲೋಕಾ ಯುಕ್ತರಿಗೆ ದೂರು ನೀಡುವುದಾಗಿ ಎಚ್ಚರಿಸಿದ ಘಟನೆ ಗುರುವಾರ ತಾಲ್ಲೂಕು ಪಂಚಾಯ್ತಿ ಸಭಾಂಗಣ ದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.

ಹಳ್ಳಿಮೈಸೂರು ಕಸ್ತೂರಬಾ ಶಾಲೆಗೆ ರೈತರು ಜಮೀನು ನೀಡಿ 6 ವರ್ಷ ಕಳೆದಿದೆ. ಆ ಜಮೀನಿನಲ್ಲಿ ಕಟ್ಟಡ ಕಟ್ಟಲು ಮುಖ್ಯಮಂತ್ರಿಗಳ ಸಭೆಯಲ್ಲೇ ಅನುಮೋದನೆ ದೊರೆತು ಹಣ ಬಿಡುಗಡೆಯಾಗಿದ್ದರೂ ಕೆಲಸ ಪ್ರಾರಂಭಿಸದ ನೀರಾವರಿ ಇಲಾಖೆಯ ಎಂಜಿನಿಯರ್ ನಂಜೇಗೌಡರಿಗೆ ‘ಕೆಲಸ ಪ್ರಾರಂಭಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ನಂತರ ತಾಲ್ಲೂಕು ವೈದ್ಯಾಧಿಕಾರಿ ಡಾ. ರಾಜೇಶ್ ಅವರಿಗೆ ‘ಏನ್ರಿ ಡಾಕ್ಟರೇ ಹಳ್ಳಿಗಳಿಗೆ ಯಾರು ಹೋಗ್ತನೇ ಇಲ್ಲವಂತಲ್ರಿ. ನೀವೇ ಕಚೇರಿಗೆ ಹೋಗದೆ ಪ್ರೈವೇಟ್ ಪ್ರಾಕ್ಟೀಸ್ ಮಾಡ್ತೀರಂತೆ. ಇದೆಲ್ಲ ಸರಿ ಇರಲ್ಲ. ಎಲ್ಲ ಸರಿ ಮಾಡಿ, ಮಾವಿನಕೆರೆ ಜಾತ್ರೆಗೆ ಮುನ್ನ ಡಿಡಿಸಿ ಸಿಂಪಡಿಸಲು ಹೇಳಿ. ಜಾತ್ರೆದಿನ ಅಲ್ಲಿ ಎರಡು ಆ್ಯಂಬುಲೆನ್ಸ್ ನಿಲ್ಲಿಸಿ’ ಎಂದು ಸೂಚಿಸಿದರು.

ಕೃಷಿ ಇಲಾಖೆ ಅಧಿಕಾರಿ ಭಾನುಪ್ರಕಾಶ್ ಅವರಿಗೆ ನೋಡಿ, ತಾಲ್ಲೂಕಿನಲ್ಲಿ ರೈತರಿಗೆ ಗೊಬ್ಬರ, ಬಿತ್ತನೆ ಬೀಜ, ಕ್ರಿಮಿ ನಾಶಕ , ಯಂತ್ರೋಪಕರಣ ದೊರೆಯುವಂತೆ ನೋಡಿಕೊಳ್ಳಿ. ಈಗ ಬಿಟ್ಟಿರುವ ನೀರಿನಿಂದ ಕೆರೆಕಟ್ಟೆಗಳನ್ನು ತುಂಬಿಸಿಕೊಂಡು ಡ್ರೈಕ್ರಾಫ್ ಬೆಳೆಗಳನ್ನು ಮಾತ್ರ ಬೆಳೆಯಲು ಸೂಚಿಸಿ. ಯಾರಿಗೂ ಭತ್ತ ಬೆಳೆಯದಂತೆ ತಿಳಿಸಿ ಎಂದು ನುಡಿದರು.ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಒಂದೇ ಒಂದು ನಲ್ಲಿ ಇದ್ದು ಅಲ್ಲಿ ನೀರಿಗೆ ತೊಂದರೆ ಇದೆ, ಕೂಡಲೆ ಅಲ್ಲಿಗೊಂದು ಬೋರ್‌ವೆಲ್ ಹಾಕಿಸಿ. ನಾನೇ    ಹೇಳಿದೆ ಎಂದು ಟಿಪ್ಪಣಿ ಬರೆಯಿರಿ ಎಂದು ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ನಾಗರಾಜ್ ಅವರಿಗೆ ತಿಳಿಸಿದರು.

ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಸ್ವಉದ್ಯೋಗ ಮಾಡುವವರಿಗೆ ನೀಡಲಾದ ಸಹಾಯದನದ ಚೆಕ್ ವಿತರಿಸಿದರು. ತಾಲ್ಲೂಕು ಪಂಚಾಯ್ತಿ  ಕಾರ್ಯನಿರ್ವಾಹಣಾಧಿಕಾರಿ ಪಿ.ಕೆ. ಅಚ್ಚಯ್ಯ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.