ಅರಸೀಕೆರೆ: ತಾಲ್ಲೂಕಿನಲ್ಲಿ ತೆಂಗು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ `ನ್ಯಾಫೆಡ್' (ನ್ಯಾಷನಲ್ ಅಗ್ರಿಕಲ್ಚರ್ ಕೋ ಆಪರೇಟಿವ್ ಫೆಡರೇಷನ್) ಖರೀದಿ ಕೇಂದ್ರದ ಅಧಿಕಾರಿಗಳು ಕೊಬ್ಬರಿ ಖರೀದಿಸಲು ಹತ್ತಾರು ನಿಬಂಧನೆ ಹೇರದೆ ಗುಣಮಟ್ಟದ ಕೊಬ್ಬರಿ ಖರೀದಿಸುವಂತೆ ಶಾಸಕ ಕೆ.ಎಂ. ಶಿವಲಿಂಗೇಗೌಡ ನ್ಯಾಫೆಡ್ ಅಧಿಕಾರಿಗಳಿಗೆ ಮಂಗಳವಾರ ತಾಕೀತು ಮಾಡಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕೊಬ್ಬರಿ ಖರೀದಿಸುವ ನ್ಯಾಫೆಡ್ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಮಳೆಯ ಅಭಾವದಿಂದ ತೆಂಗು ಬೆಳೆ ಬಹು ಸಂಕೀರ್ಣ ರೋಗಕ್ಕೆ ತುತ್ತಾಗಿ ಒಂದೆಡೆ ಸುಳಿ ಉದುರುತ್ತಿದ್ದರೆ, ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ವಾರದಿಂದ ವಾರಕ್ಕೆ ಇಳಿಮುಖವಾಗುತ್ತಿರುವುದರಿಂದ ತೆಂಗು ಬೆಳೆಗಾರರು ಕಂಗಾಲಾಗಿ ಅವರ ಬದುಕು ಮೂರಾಬಟ್ಟೆಯಾಗಿದೆ ಎಂದು ವಿಷಾದಿಸಿದರು.
ಕೇಂದ್ರ ಸರ್ಕಾರ ಕ್ವಿಂಟಲ್ ಕೊಬ್ಬರಿಗೆ 5500 ರೂಪಾಯಿ ಘೋಷಿಸಿದ್ದರೆ, ರಾಜ್ಯ ಸರ್ಕಾರ 1000 ಪ್ರೋತ್ಸಾಹ ಧನ ನೀಡಿದೆ. ಈ ಹಿನ್ನೆಲೆಯಲ್ಲಿ ಒಟ್ಟು 6,500 ರೂಪಾಯಿಗೆ ನ್ಯಾಫೆಡ್ ಖರೀದಿ ಕೇಂದ್ರದ ಮೂಲಕ ಇಂದಿನಿಂದಲೇ ಕೊಬ್ಬರಿ ಖರೀದಿಸಲಾಗುವುದು ಎಂದರು.
ಯಾವುದೇ ಅಧಿಕಾರಿ, ಕಾರ್ಡು ವಿತರಿಸುವ ಕಂದಾಯ ಅಧಿಕಾರಿ ಅಥವಾ ಮಾರುಕಟ್ಟೆಯಲ್ಲಿರುವ ಹಮಾಲಿಗಳಿಗಾಗಲಿ ರೈತರು ಹಣ ನೀಡಬಾರದು. ಕೊಬ್ಬರಿ ಖರೀದಿ ಕೇಂದ್ರ ನಿರಂತರವಾಗಿದ್ದು, ರೈತರು ಮುಗಿಬೀಳದೆ ತಾಳ್ಮೆಯಿಂದ ಕೊಬ್ಬರಿ ತಂದು ಮಾರಾಟ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಬೇಲೂರು ಶಾಸಕ ರುದ್ರೇಶ್‌ಗೌಡ ಮಾತನಾಡಿ, ತೆಂಗು ಮತ್ತು ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಸರ್ಕಾರ ಸ್ಪಷ್ಟವಾಗಿ ತಿಳಿದಿದೆ. ಆದ್ದರಿಂದಲೇ ಪೋತ್ಸಾಹ ಧನದ ಮೂಲಕ ರೈತರ ನೆರವಿಗೆ ಧಾವಿಸಿದೆ ಎಂದರು.
ಎ.ಪಿ.ಎಂ.ಸಿ ಅಧ್ಯಕ್ಷ ಮುರುಂಡಿ ಶಿವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತೀಯ ಕಿಸಾನ್ ಸಂಘದ ಅರಸೀಕೆರೆ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತಪ್ಪಗೌಡ, ಪುರಸಭೆ ಮಾಜಿ ಅಧ್ಯಕ್ಷ ಎನ್.ಎಸ್. ಸಿದ್ದರಾಮಶೆಟ್ಟಿ ಎ.ಪಿ.ಎಂ.ಸಿ. ಸದಸ್ಯರಾದ ದುಮ್ಮೇನಹಳ್ಳಿ ಗಂಗಾಧರ್, ಕಲ್ಲಹಳ್ಳಿ ನಾಗರಾಜ್ ಮಾತನಾಡಿದರು. ಸದಸ್ಯರಾದ ರುದ್ರೇಶ್, ಸಿದ್ದಲಿಂಗಪ್ಪ, ವಾಲೇಹಳ್ಳಿ ಕಲ್ಲೇಶಪ್ಪ, ಅಜ್ಜಪ್ಪ, ಜಿ.ಪಂ. ಸದಸ್ಯ ಹುಚ್ಚೇಗೌಡ, ತಾ.ಪಂ. ಮಾಜಿ ಉಪಾಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ಕೆ.ಎಂ. ನಂಜುಂಡಪ್ಪ, ಎ.ಪಿ.ಎಂ.ಸಿ. ಕಾರ್ಯದರ್ಶಿ ಈಶ್ವರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.