ADVERTISEMENT

ಕೋಳಿ ತ್ಯಾಜ್ಯದಿಂದ ಸಾರ್ವಜನಿಕರಿಗೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 19:30 IST
Last Updated 3 ಆಗಸ್ಟ್ 2012, 19:30 IST

ಚನ್ನರಾಯಪಟ್ಟಣ: ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳದಲ್ಲಿನ ಜಿನ್ನನಾಥಪುರ ಗ್ರಾಮದ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕೋಳಿ ತ್ಯಾಜ್ಯ ಬಿಸಾಡಿರುವುದರಿಂದ ಜನತೆ ಮೂಗುಮುಚ್ಚಿಕೊಂಡು ಸಂಚರಿಸಬೇಕಾದ ಸ್ಥಿತಿ ಬಂದಿದೆ.

ಈ ಗ್ರಾಮದಲ್ಲಿ 4 ಕೋಳಿ ಮಾಂಸ ಮಾರಾಟ ಮಳಿಗೆಗಳಿವೆ. ಸಂಜೆಯಾಗುತ್ತಿದ್ದಂತೆ ಕೋಳಿ ತ್ಯಾಜ್ಯವನ್ನು ಮೂಟೆಯಲ್ಲಿ ತುಂಬಿ ದ್ವಿಚಕ್ರ ವಾಹನಗಳಲ್ಲಿ ತಂದು ಬಿಸಾಡುತ್ತಿದ್ದಂತೆ ಅಲ್ಲಿಗೆ ಮುತ್ತಿಕೊಳ್ಳುವ ನಾಯಿಗಳು, ನಾ ಮುಂದು ತಾ ಮುಂದು ಎಂಬಂತೆ ಪೈಪೋಟಿಯಲ್ಲಿ ಕಚ್ಚಾಡುತ್ತ ತಿನ್ನುವ ದೃಶ್ಯ ಕಂಡು ಬರುತ್ತದೆ. ಮೂರು ಕಡೆ ರಾಶಿಗಟ್ಟಲೆ ಕೋಳಿ ತ್ಯಾಜ್ಯ ಬಿಸಾಡಲಾಗಿದೆ.
 
ಶ್ರವಣಬೆಳಗೊಳ- ಮಟ್ಟನವಿಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಜಿನ್ನನಾಥಪುರ ಗ್ರಾಮ ಹಾಗೂ ಕೊಪ್ಪಲು, ಹಳೇಬೆಳಗೊಳ, ಗುಳ್ಳೇನಹಳ್ಳಿ, ಹೊಸಕೊಪ್ಪಲು, ಮರಿಶೆಟ್ಟಿಹಳ್ಳಿ ಗ್ರಾಮಕ್ಕೆ ಜನತೆ ತೆರಳುತ್ತಾರೆ. ಪ್ರತಿನಿತ್ಯ ಶಾಲಾ ಮಕ್ಕಳು, ಸಾರ್ವಜನಿಕರು ಮೂಗು ಮಚ್ಚಿಕೊಂಡು ಹೋಗಬೇಕಿದೆ.
 
ಈ ಸ್ಥಳ ಬಂತೆಂದರೆ ಸಾಕು ನಡೆದುಕೊಂಡು ಹೋಗುವವರು, ದ್ವಿಚಕ್ರ ವಾಹನ, ಆಟೋ ವಾಹನಗಳಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಳ್ಳುತ್ತಾರೆ. ವಾಕರಿಕೆ ಬರುವಷ್ಟು ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಸಮುದಾಯ ಭವನದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವ ಜಾಗದ ಸುತ್ತ ತ್ಯಾಜ್ಯ ಬಿಸಾಡಿವುದರಿಂದ ಪರಿಸರ ಮತ್ತಷ್ಟು ಕಲುಷಿತಗೊಂಡಿದೆ.

ಇದರ ಪಕ್ಕದಲ್ಲಿ ಕೆರೆ ಇದೆ. ಕೋಳಿ ತ್ಯಾಜ್ಯ ಪೈಪ್ ಮೂಲಕ ಕೆರೆ ಸೇರಿ ನೀರು ಕಲುಷಿತಗೊಳ್ಳುತ್ತಿದೆ. ಈ ಕೆರೆಯಲ್ಲಿ ಬಟ್ಟೆ ಸ್ವಚ್ಛಗೊಳಿಸಲಾಗುತ್ತದೆ. ದನ, ಕರುಗಳು ಇದೇ ಕೆರೆಯ ನೀರನ್ನು ಕುಡಿಯುತ್ತವೆ. ತ್ಯಾಜ್ಯ ಎಸೆಯುವುದನ್ನು ಕೂಡಲೇ ನಿಲ್ಲಿಸದಿದ್ದರೆ ಸಾಂಕ್ರಾಮಿಕ ರೋಗ ಹರಡುವುದು ಖಚಿತ ಎನ್ನುತ್ತಾರೆ ಇಲ್ಲಿನ ಜನರು.

ರಕ್ತದ ರುಚಿ ನೋಡಿರುವ ನಾಯಿಗಳು ಬೆಳಿಗ್ಗೆಯಿಂದ ಸಂಜೆವರೆಗೆ ಈ ಜಾಗ ಬಿಟ್ಟು ಕದಲುವುದಿಲ್ಲ. ಸಂಜೆಯಾಗುತ್ತಿದ್ದಂತೆ ಇವುಗಳ ಗುಂಪು ಜಾಸ್ತಿಯಾಗುತ್ತದೆ. ಸಾಕಷ್ಟು ಸಂದರ್ಭದಲ್ಲಿ ಕುರಿಗಳಿಗೆ, ದನಕರುಗಳಿಗೆ ಕಚ್ಚಿವೆ. ಜನರನ್ನು ಅಟ್ಟಿಸಿಕೊಂಡು ಹೋಗಿವೆ ಎನ್ನುತ್ತಾರೆ ರೈತರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.