ADVERTISEMENT

ಕ್ಯಾಂಟೀನ್‌ಗೆ ತಟ್ಟದ ನೀತಿಸಂಹಿತೆ ಬಿಸಿ

ಹಲವೆಡೆ ರಾರಾಜಿಸುತ್ತಿರುವ ಬ್ಯಾನರ್‌ಗಳು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 10:46 IST
Last Updated 30 ಮಾರ್ಚ್ 2018, 10:46 IST

ಹಾಸನ: ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ ಯಲ್ಲಿದ್ದರೂ ನಗರದ ಚಾಮರಾಜೇಂದ್ರ ಆಸ್ಪತ್ರೆ ಎದುರಿನ ಇಂದಿರಾ ಕ್ಯಾಂಟೀನ್ ಕಟ್ಟಡದಲ್ಲಿರುವ ಇಂದಿರಾ ಗಾಂಧಿ ಭಾವ ಚಿತ್ರಕ್ಕೆ ಈವರೆಗೂ ಪರದೆ ಮುಚ್ಚಿಲ್ಲ.ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜಿಲ್ಲಾಮಟ್ಟದಲ್ಲಿ ಒಂದು ತಂಡ, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಫ್ಲೈಯಿಂಗ್‌ ಸ್ಕ್ವಾಡ್, ಎಂಸಿಸಿ ತಂಡ ರಚಿಸಲಾಗಿದೆ.

ಹಾಸನ ಸೇರಿದಂತೆ ಇತರೆ ಕಡೆಗಳಲ್ಲಿ ಸರ್ಕಾರದ ಸಾಧನೆಗಳನ್ನು ಸಾರುವ ಫಲಕ ಮತ್ತು ರಾಜಕೀಯ ವ್ಯಕ್ತಿಗಳ ಪ್ರಚಾರದ ಬೋರ್ಡ್‌ಗಳನ್ನು ಇನ್ನೂ ಸಂಪೂರ್ಣವಾಗಿ ತೆರವು ಗೊಳಿಸಿಲ್ಲ.ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳ ಬ್ಯಾನರ್, ಬಂಟಿಂಗ್ಸ್, ಚುನಾವಣಾ ಪ್ರಚಾರ ಸಾಮಗ್ರಿಗಳು ಇದ್ದಲ್ಲಿ ಅವುಗಳನ್ನು ಕೂಡಲೇ ತೆರವುಗೊಳಿಸಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಜಿಲ್ಲಾ ಕೈಗಾರಿಕಾ ಕೇಂದ್ರ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಸಿದ್ದರಾಮಯ್ಯ ಭಾವಚಿತ್ರ ಇರುವ ಕೈಮಗ್ಗ ಮತ್ತು ಜವಳಿ ಕ್ಷೇತ್ರದ ಅಭಿವೃದ್ಧಿಯ ಪಥದಲ್ಲಿ ಎಂಬ ಸರ್ಕಾರದ ಬ್ಯಾನರ್ ಹಾಗೆಯೇ ಇದೆ.ನಗರದ ರಿಂಗ್ ರಸ್ತೆಯಲ್ಲಿ ಹಾಸನ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಒಬ್ಬರ ಭಾವಚಿತ್ರ ಹಾಗೂ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಮಾಜಿ ಸಚಿವ ವಿ.ಸೋಮಣ್ಣ ಸೇರಿದಂತೆ ಇತರೆ ನಾಯಕರಿರುವ ಬ್ಯಾನರ್ ತೆಗೆದು ಹಾಕಿಲ್ಲ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.