ADVERTISEMENT

ಖಾತರಿ ಅವ್ಯವಹಾರ ತನಿಖಾ ವರದಿ ಸಿಇಒಗೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 5 ಮೇ 2012, 6:05 IST
Last Updated 5 ಮೇ 2012, 6:05 IST

ಹಾಸನ: ಉದ್ಯೋಗ ಖಾತರಿ ಯೋಜನೆಯಲ್ಲಿ ಹಾಸನ ತಾಲ್ಲೂಕು ದುದ್ದ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀನರಸಯ್ಯ ಅವರು ಶನಿವಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಟಿ. ಅಂಜನ್ ಕುಮಾರ್ ಅವರಿಗೆ ವರದಿ ಸಲ್ಲಿಸಿರುವು ದಾಗಿ ತಿಳಿದುಬಂದಿದೆ.

ಗ್ರಾಮ ಪಂಚಾಯಿತಿಯಲ್ಲಿ ಅನೇಕ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಚಿಕ್ಕಡಲೂರು ಗ್ರಾಮಸ್ಥರು ಈಚೆಗೆ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗಹಾಕಿ ಪ್ರತಿಭಟನೆ ನಡೆಸಿದ್ದರು. ಗ್ರಾಮ ಪಂಚಾಯಿತಿ ಸುತ್ತ ತಡೆಗೋಡೆ ನಿರ್ಮಿಸು ವುದು, ಕೆರೆಯ ಹೂಳೆತ್ತುವುದು ಸೇರಿದಂತೆ ಹಲವು ಕಾಮಗಾರಿ ಗಳಲ್ಲಿ ಅಕ್ರಮ ನಡೆದಿದೆ, ಅನೇಕ ಕಡೆ ಕಾಮಗಾರಿ ನಡೆಯದೆಯೇ ಬಿಲ್ ಮಾಡಲಾಗಿದೆ ಎಂದು ಗ್ರಾಮ ಸ್ಥರು ಆರೊಪಿಸಿದ್ದರು.

ಘಟನೆಯ ಬಳಿಕ ಸ್ಥಳಕ್ಕೆ ಭೇಟಿನೀಡಿದ್ದ ಹಾಸನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವೇಗೌಡ ಹಾಗೂ ಜಿಲ್ಲಾ ಪಂಚಾಯಿತಿ ಸಹಕಾರ್ಯದರ್ಶಿ ಲಕ್ಷ್ಮೀನರಸಯ್ಯ ಅವರು ಎಲ್ಲ ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡು ಬಂದಿದ್ದರು.

 ಗ್ರಾಮಸ್ಥರ ಆರೋಪದ ಹಿನ್ನೆಲೆಯಲ್ಲಿ ಎಲ್ಲ ಸ್ಥಳಗಳಿಗೆ ಭೇಟಿನೀಡಿ ಪರಿಶೀಲನೆ  ಮಾಡಿದ್ದ ಕಾರ್ಯದರ್ಶಿ, ವಿಸ್ತೃತ ವರದಿಯ ಜತೆಗೆ ಸುಮಾರು 200 ಪುಟಗಳಷ್ಟು ದಾಖಲೆಗಳನ್ನು ಸಿಇಓ ಅವರಿಗೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಕ್ರಮ?
 ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಪಾತ್ರ ಪ್ರಮುಖ ವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವರದಿಯಲ್ಲಿ ಸಲಹೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಲ್ಲಿ ಜಿಲ್ಲೆ ಯಲ್ಲಿ ಸುಮಾರು 25ಕ್ಕೂ ಹೆಚ್ಚು ಪಿಡಿಒಗಳು ಅಮಾನತು ಗೊಂಡಿದ್ದು, ದುದ್ದ ಗ್ರಾಮ ಪಂಚಾಯಿತಿ  ಪಿಡಿಓ ವಿರುದ್ಧವೂ ಇಂಥ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಾಗಿದೆ. ವರದಿಯಲ್ಲೇನಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.