ADVERTISEMENT

ಖಾತೆ ಅಕ್ರಮ: ತಹಶೀಲ್ದಾರ್ ವಜಾಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 5:25 IST
Last Updated 15 ಫೆಬ್ರುವರಿ 2012, 5:25 IST

ಹಾಸನ: `ತಹಶೀಲ್ದಾರ್ ಮಥಾಯಿ ಅವರು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸಾಲಗಾಮೆ ಹೋಬಳಿ ದೇವಿಹಳ್ಳಿ ಗ್ರಾಮದ ರಂಗೇಗೌಡ ಎಂಬುವರಿಗೆ ಸೇರಿದ್ದ ಭೂಮಿಯನ್ನು ಅಕ್ರಮವಾಗಿ ತಹಶೀಲ್ದಾರರ್ ಕಚೇರಿ ಸಿಬ್ಬಂದಿ ಶಿವಣ್ಣ ಎಂಬುವರಿಗೆ ಖಾತೆ ಮಾಡಿ ಕೊಟ್ಟಿದ್ದು, ಅಕ್ರಮ ಎಸಗಿರುವ ತಹಶೀಲ್ದಾರ್ ಅವರನ್ನು ವಜಾ ಮಾಡಬೇಕು~ ಎಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ಯುವ ದಲಿತ ಸಂಘರ್ಷ ಸಮಿತಿ  ಜಿಲ್ಲಾಧಿಕಾರಿ ಕಚೇರಿ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

ದೇವಿಹಳ್ಳಿಯ ಸರ್ವೆ ನಂ. 28/02ರಲ್ಲಿರುವ ಎರಡು ಎಕರೆ 16ಗುಂಟೆ ಜಾಗವನ್ನು 1964- 65ನೇ ಸಾಲಿನಲ್ಲೇ ರಂಗೇಗೌಡ ಎಂಬುವವರಿಗೆ ಖಾತೆ ಮಾಡಿ ನೀಡಲಾಗಿತ್ತು. ಆದರೆ ಈ ಜಮೀನಿಗೆ ಸಂಬಂಧಿಸಿದಂತೆ 1999-2000ನೇ ಸಾಲಿನಲ್ಲಿ ತಹಶೀಲ್ದಾರರ ಕಚೇರಿ ಸಿಬ್ಬಂದಿ ಶಿವಣ್ಣ ಎಂಬುವವರು ಸುಳ್ಳು ಪಹಣಿ ಸೃಷ್ಟಿಸಿದ್ದರು.

ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ರಂಗೇಗೌಡ ಅವರ ಪರವಾಗಿಯೇ ನ್ಯಾಯಾಲಯ ಆದೇಶವನ್ನೂ ನೀಡಿತ್ತು. ಇದಾದ ಮೇಲೆ ತಹಶೀಲ್ದಾರರನ್ನು ಹಲವುಬಾರಿ ಮನವಿ ಮಾಡಿಕೊಂಡರೂ, ಸರ್ವೆ ನಡೆಸಬೇಕು, ಪರಿಶೀಲನೆ ನಡೆಸಬೇಕು ಎಂದೆಲ್ಲ ಸಬೂಬು ಹೇಳುತ್ತ ನ್ಯಾಯಾಲಯದ ಸೂಚನೆಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಈಗಾಗಲೇ ಅವರು ಹಲವುಬಾರಿ ಪರಿಶೀಲನೆ ನಡೆಸಿದ್ದಾರೆ.

ಹಿಂದೆಯೂ ಒಮ್ಮೆ ಪ್ರತಿಭಟನೆ ನಡೆಸಿ ವಿಚಾರವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಉಪಯೋಗವಾಗಿಲ್ಲ. ಕೂಡಲೇ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ತಹಶೀಲ್ದಾರ ಮಥಾಯಿ ಅವರನ್ನು ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಹೇಮಾವತಿ ಪ್ರತಿಮೆ ಮುಂದಿನಿಂದ ಅರೆಬೆತ್ತಲೆ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ವರೆಗೆ ಬಂದ ಪ್ರತಿಭಟನಾಕಾರರು ಅಲ್ಲಿ ಮಥಾಯಿ ವಿರುದ್ಧ ಘೋಷಣೆಗಳನ್ನು ಕೂಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಮಿತಿ ಅಧ್ಯಕ್ಷ ನಾಗರಾಜ ಹೆತ್ತೂರು, ಕ್ರಾಂತಿ ತ್ಯಾಗಿ, ಬಸವರಾಜು ದೇವಿಹಳ್ಳಿ, ಟಿ.ಸಿ. ಶಿವ ಕುಮಾರ, ಟಿ.ಡಿ. ಜಗದೀಶ ಚೌಡಳ್ಳಿ ಮತ್ತಿತರರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.