ADVERTISEMENT

ಖಾತ್ರಿ: ತರಾತುರಿ ಕೆಲಸದ ವಿರುದ್ಧ ಆರೋಪ-ಪ್ರತ್ಯಾರೋಪ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 7:40 IST
Last Updated 21 ಏಪ್ರಿಲ್ 2012, 7:40 IST

ಹಾಸನ: ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ      ವಾರಕ್ಕೊಂದರಂತೆ ಹಗರಣ, ಆರೋಪ, ಪ್ರತಿಭಟನೆಗಳು     ನಡೆಯುತ್ತಿವೆ. ಮಂಜೂರಾಗಿರುವ ಹಣ ಯಾವುದೇ ಕಾರಣಕ್ಕೂ ಪುನಃ ಸರ್ಕಾರಕ್ಕೆ ಹೋಗಬಾರದು ಎಂದು ಹಿರಿಯ ಅಧಿಕಾರಿಗಳು ಗ್ರಾ.ಪಂ.ಗಳ ಮೇಲೆ ಒತ್ತಡ ಹೇರುತ್ತಿರುವುದು ಇನ್ನಷ್ಟು ಅಕ್ರಮಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ಸಾರ್ವಜನಿಕರು ಹಾಗೂ ಕೆಲವು ಗ್ರಾ.ಪಂ. ಸದಸ್ಯರು ಆರೋಪಿಸುವಂತಾಗಿದೆ.

ಹಾಸನ ತಾಲ್ಲೂಕು ದುದ್ದ ಗ್ರಾ.ಪಂ. ನಲ್ಲಿ ಈಚೆಗೆ ನಡೆದ ಪ್ರತಿಭಟನೆ ಇದಕ್ಕೆ ತಾಜಾ ನಿದರ್ಶನವಾಗಿದೆ.
ಚಿಕ್ಕಡಲೂರು ಗ್ರಾಮದಲ್ಲಿ ನಡೆದ ಹಲವು ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬುಧವಾ ಗ್ರಾಮಸ್ಥರು ಗ್ರಾ.ಪಂ. ಮುಂದೆ ಇಡೀ ದಿನ ಪ್ರತಿಭಟನೆ ನಡೆಸಿದ್ದರು.

`ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ನಡೆದಿಲ್ಲ. ಕೆಲವು ಕಾಮಗಾರಿಗಳನ್ನು ಆರಂಭ ಮಾಡುವಲ್ಲಿ ಸ್ವಲ್ಪ ವಿಳಂಬವಾಗಿದೆ. ಇದನ್ನೇ ಅಕ್ರಮ ಎಂದು ಕೆಲವರು ಪ್ರತಿಭಟನೆ ಮಾಡುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಕ್ರಮ ನಡೆದಿರುವುದು ಕಂಡುಬಂದಲ್ಲಿ ಅಂಥ ಗುತ್ತಿಗೆದಾರರಿಗೆ ಹಣ ಪಾವತಿಸುವುದಿಲ್ಲ~ ಎಂದು ಗ್ರಾ.ಪಂ. ಅಧ್ಯಕ್ಷ ಹುಚ್ಚೇಗೌಡ ಶುಕ್ರವಾರ `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದರು.

`ಕಾಮಗಾರಿ ಮುಗಿದ ಬಳಿಕ ಬಿಲ್  ಪಾವತಿ ಮಾಡಬೇಕಾಗಿರುವುದು ಪದ್ಧತಿ. ಆದರೆ ದುದ್ದ ಗ್ರಾಮ ಪಂಚಾಯಿತಿಗೆ ಕಾಂಪೌಂಡ್ ನಿರ್ಮಾಣದ ಬಗ್ಗೆ 79 ಸಾವಿರ ರೂಪಾಯಿ ಬಿಲ್ ಸಿದ್ಧವಾಗಿದೆ. ಆದರೆ ಕಾಂಪೌಂಡ್ ಈವರೆಗೆ ನಿರ್ಮಾಣ ವಾಗಿಲ್ಲ. ಇಂಥ ಹಲವು ಅಕ್ರಮ ನಡೆದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದೇವೆ~ ಎಂದು ಚಿಕ್ಕಡಲೂರು ಗ್ರಾಮದ ದಿವಾಕರ ಆರೋಪಿಸುತ್ತಿದ್ದಾರೆ.

ಬಿಲ್ ಸಿದ್ಧವಾಗಿದೆ ಎಂಬುದನ್ನು ಅಧ್ಯಕ್ಷರೂ ಒಪ್ಪಿದ್ದಾರೆ. `ಬಿಲ್ ಸಿದ್ಧವಾಗಿದೆಯೇ ವಿನಾ ಹಣ ಪಾವತಿ ಆಗಿಲ್ಲ. ಮಾರ್ಚ್ ಅಂತ್ಯದೊಳಗೆ ಹಣ ಖರ್ಚು ಮಾಡಬೇಕಾಗಿದ್ದರಿಂದ ಬಿಲ್ ಮಾಡಿದ್ದೇವೆ. ಆವರಣದಲ್ಲಿದ್ದ ಶೆಡ್ ತೆಗೆದು ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ವಿಳಂಬವಾಗಿದೆ.
 
ಅಭಿವ್ಧೃೊ ಕಾಮಗಾರಿ ಆಗಬೇಕು ಎಂಬ ನಿಟ್ಟಿನಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿದ್ದೇವೆ~ ಎಂಬುದು ಅವರ ಅಭಿಪ್ರಾಯ. ಪ್ರತಿಭಟನೆ ನಡೆದ ಬಳಿಕ ಗುರುವಾರದಿಂದ ಕಾಂಪೌಂಡ್ ನಿರ್ಮಾಣ ಕಾಮಗಾರಿಯೂ ಆರಂಭವಾಗಿದೆ. ಆದರೆ ಕಾಮಗಾರಿಯನ್ನು ಸ್ಥಳೀಯ ಜಾಬ್‌ಕಾರ್ಡ್ ಹೊಂದಿರುವವರಿಗೆ ನೀಡಿಲ್ಲ. ಬೇರೆ ಊರಿನ ಕಾರ್ಮಿಕರು ಕಾಮಗಾರಿ ನಡೆಸುತ್ತಿದ್ದಾರೆ. 

ಇದರಂತೆ ಹೆಗ್ಗೆರೆ ಕೆರೆಯಿಂದ ದಿವಾಕರ ಮಾತ್ರವಲ್ಲದೆ ಬೋರೇಗೌಡ, ವಾಸು, ರವಿ ಮುಂತಾದ ರೈತರು ಮಣ್ಣು ತೆಗೆದು ತಮ್ಮ ತೋಟಗಳಿಗೆ ಸಾಗಿಸಿದ್ದಾರೆ. ಆದರೆ ಅದನ್ನೇ ಹೂಳೆತ್ತುವ ಕಾಮಗಾರಿ ಎಂದು ಬಿಲ್  ಮಾಡಿದ್ದಾರೆ ಎಂಬ ಆರೊಪವನ್ನೂ ಗ್ರಾಮಸ್ಥರು ಮಾಡಿದ್ದಾರೆ. `ಈ ಬಗ್ಗೆ ತನಿಖೆ ಮಾಡಿಸಿ ಅಕ್ರಮ ನಡೆದಿದ್ದರೆ ಹಣ ಪಾವತಿ ಮಾಡುವುದಿಲ್ಲ.
 
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಹಾಗೂ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು ಬಂದು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ತನಿಖೆ ಮಾಡುತ್ತಿದ್ದಾರೆ. ಅವರ ವರದಿ ಬಂದ ಬಳಿಕವೇ ಬಿಲ್ ಪಾವತಿ ಮಾಡುವ ಬಗ್ಗೆ ತೀರ್ಮಾನಿಸಲಾಗುವುದು~ ಎಂದು ಅಧ್ಯಕ್ಷರು ನುಡಿಯುತ್ತಾರೆ. ಕಾಮಗಾರಿ ಆರಂಭಕ್ಕೂ ಮುನ್ನವೇ ಬಿಲ್ ಸಿದ್ಧವಾಗಿದ್ದು ಹೇಗೆ ಎಂಬ ಬಗ್ಗೆ ಯಾರ ಬಳಿಯಲ್ಲೂ ಉತ್ತರವಿಲ್ಲ.

ದುದ್ದ ಗ್ರಾಮ ಪಂಚಾಯಿತಿಗೆ 2011-12ನೇ ಸಾಲಿನಲ್ಲಿ ಒಟ್ಟು 42 ಕಾಮಗಾರಿಗಳಿಗೆ 98 ಲಕ್ಷ ರೂಪಾಯಿಯ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿತ್ತು. ಅದರಲ್ಲಿ 26 ಲಕ್ಷ ರೂಪಾಯಿ ಪಾವತಿ ಮಾಡಲಾಗಿದೆ. ಇನ್ನೂ 37.5 ಲಕ್ಷ ರೂಪಾಯಿ ಹಣ ನೀಡಲು ಬಾಕಿ ಇದೆ. ಇಷ್ಟೆಲ್ಲದರ ಹೊರತಾಗಿಯೂ ಸುಮಾರು 35.5 ಲಕ್ಷ ರೂಪಾಯಿ ಬಳಕೆಯಾಗದೆ ಸರ್ಕಾರಕ್ಕೆ ಮರಳಿಸುವ ಪ್ರಮೇಯ ಬಂದಿದೆ.

ನಾಳೆ ವರದಿ ಸಲ್ಲಿಕೆ
`ದುದ್ದ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ತಂದಿದ್ದೇವೆ. ಕಾಮಗಾರಿ ನಡೆದಿದೆಯೇ ಇಲ್ಲವೇ ಎಂಬುದು ಕಣ್ಣಿಗೆ ಗೋಚರಿಸುತ್ತದೆ. ಸ್ಥಳಪರಿಶೀಲನೆಯನ್ನೂ ನಡೆಸಿದ್ದೇವೆ. ಶನಿವಾರ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವರದಿ ಸಲ್ಲಿಸುತ್ತೇವೆ. ಅಲ್ಲಿಯವರೆಗೆ ಏನನ್ನೂ ಹೇಳಲಾಗದು~ ಎಂದು ಜಿ.ಪಂ. ಉಪಕಾರ್ಯದರ್ಶಿ ಲಕ್ಷ್ಮೀ ನರಸಯ್ಯ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.