ADVERTISEMENT

ಗುಳಸಿಂಧ: 30 ಮಂದಿ ಅಸ್ವಸ್ಥ

ಕಲುಷಿತ ನೀರು ಸೇವನೆ; ಆರೋಗ್ಯ ಸಿಬ್ಬಂದಿ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 7:05 IST
Last Updated 21 ಜೂನ್ 2013, 7:05 IST
ಚನ್ನರಾಯಪಟ್ಟಣ ತಾಲ್ಲೂಕು ಗುಳಸಿಂಧ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಮಕ್ಕಳು ಹಾಗೂ ಮಹಿಳೆಯರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು
ಚನ್ನರಾಯಪಟ್ಟಣ ತಾಲ್ಲೂಕು ಗುಳಸಿಂಧ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಮಕ್ಕಳು ಹಾಗೂ ಮಹಿಳೆಯರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು   

ಚನ್ನರಾಯಪಟ್ಟಣ: ಕಲುಷಿತ ನೀರು ಸೇವಿಸಿ 30 ಮಂದಿ ವಾಂತಿ, ಭೇದಿಯಿಂದ ಅಸ್ವಸ್ಥರಾದ ಘಟನೆ ತಾಲ್ಲೂಕಿನ ಗುಳಸಿಂಧ ಗ್ರಾಮದಲ್ಲಿ ಗುರುವಾರ ನಡೆದಿದೆ.

ಬುಧವಾರ ಸಂಜೆಯಿಂದಲೇ ಕೆಲವರಿಗೆ ವಾಂತಿ, ಭೇದಿ ಕಾಣಿಸಿಕೊಂಡಿತ್ತು. ಗುರುವಾರ ಬೆಳಿಗ್ಗೆ ಆಶಾ ಕಾರ್ಯಕರ್ತರಿಗೆ ವಿಚಾರ ತಿಳಿದು ಅವರು ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ವಿಷಯ ತಿಳಿಸಿದರು. ಬಳಿಕ ಆಂಬು ಲೆನ್ಸ್ ಮೂಲಕ ಜನರನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು. 30 ಜನರಲ್ಲಿ 12 ವಿದ್ಯಾರ್ಥಿಗಳು ಸೇರಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ಇಬ್ಬರನ್ನು ಹಾಸನಕ್ಕೆ ದಾಖಲಿಸಲಾಗಿದೆ.

ಮಳೆಗಾಲದಲ್ಲಿ ಗ್ರಾಮದಲ್ಲಿನ ನಲ್ಲಿಗಳಲ್ಲಿ ಕಲುಷಿತ ಕೆಂಪು ನೀರು ಬರುತ್ತದೆ. ಇದನ್ನು ಕುಡಿದಿದ್ದರಿಂದ ಈ ಸಮಸ್ಯೆ ಆಗಿರಬಹುದು ಎಂದು ಚಿಕಿತ್ಸೆ ಪಡೆಯುತ್ತಿರುವವರು ನುಡಿದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಶ್ ಆರಾಧ್ಯ ಮತ್ತು ಸಿಬ್ಬಂದಿ, ಇನ್‌ಸ್ಪೆಕ್ಟರ್ ಎ. ಮಾರಪ್ಪ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮದಲ್ಲಿ ಕೊಳವೆ ಬಾವಿ ಪಕ್ಕದಲ್ಲಿ ಚರಂಡಿ ಇದೆ. ಕೇಸಿಂಗ್ ಪೈಪ್ ಒಡೆದು ಅದರ ಮೂಲಕ ಚರಂಡಿ ಮತ್ತು ಮಳೆ ನೀರು ಸೇರಿರುವ ಸಾಧ್ಯತೆ ಇದೆ. ಅಲ್ಲದೇ, ಗ್ರಾಮದಲ್ಲಿ ಅಲ್ಲಲ್ಲಿ ಪೈಪ್ ಹದಗೆಟ್ಟಿದೆ. ಚರಂಡಿ ನೀರು ಸರಾಗವಾಗಿ ಹರಿಯುತ್ತಿಲ್ಲ. ತಿಪ್ಪೆಗಳನ್ನು ತೆರವುಗೊಳಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಶ್ ಆರಾಧ್ಯ, ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರು.

ಗ್ರಾಮದಲ್ಲಿ 10 ಮಂದಿ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕುದಿಸಿ ಆರಿಸಿದ ನೀರನ್ನು ಕುಡಿಯುವಂತೆ ಗ್ರಾಮಸ್ಥರಿಗೆ ಸಲಹೆ ನೀಡಲಾಗಿದೆ.

ಗ್ರಾಮದ ಹೊರಭಾಗದಲ್ಲಿ 15 ದಿನಗಳ ಹಿಂದೆ ಹೊಸದಾಗಿ ಕೊಳವೆ ಬಾವಿ ಕೊರೆಯಲಾಗಿದೆ. ಈಗ ಅದಕ್ಕೆ ಮೋಟರ್ ಅಳವಡಿಸಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವುದಾಗಿ  ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಎನ್. ರಾಮಸ್ವಾಮಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.