ADVERTISEMENT

ಚಿಪ್ಸ್‌ ತಯಾರಿಕಾ ಘಟಕ ಆರಂಭ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಎಚ್‌.ಡಿ ರೇವಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 8:17 IST
Last Updated 16 ಜೂನ್ 2018, 8:17 IST

ಹಾಸನ: ಸೋಮನಹಳ್ಳಿ ಕಾವಲ್ ನ ಆಲೂಗೆಡ್ಡೆ ಸಂಶೋಧನಾ ಕೇಂದ್ರದಲ್ಲಿ ಚಿಪ್ಸ್ ತಯಾರಿಕಾ ಘಟಕ ಪ್ರಾರಂಭಿಸುವ ಕುರಿತು ತೋಟಗಾರಿಕಾ ಸಚಿವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಸಚಿವ ಎಚ್. ಡಿ. ರೇವಣ್ಣ ಹೇಳಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ನಡೆದ ಇಲಾಖಾವಾರು ಅಧಿಕಾರಿಗಳ ಸಭೆಯಲ್ಲಿ ಜಿಲ್ಲೆಯಲ್ಲಿ ಹೊಸದಾಗಿ ತೋಟಗಾರಿಕೆ ಕಾಲೇಜು ಆರಂಭಿಸುವುದು ಸೇರಿದಂತೆ ತಮ್ಮ ಹೊಸ ಉದ್ದೇಶಿತ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂಜಯ್‌, ‘ಜಿಲ್ಲೆಯಲ್ಲಿ 11,800 ಹೆಕ್ಟೇರ್‌ ಪ್ರದೇಶದಲ್ಲಿ ಆಲೂಗೆಡ್ಡೆ ಬಿತ್ತನೆ ಮಾಡಲಾಗಿದೆ. ಶೇಕಡಾ 180 ರಷ್ಟು ಮಳೆಯಾದ ಕಾರಣ 5,333 ಹೆಕ್ಟೇರ್‌ ಆಲೂ ಬೆಳೆ ಹಾನಿಯಾಗಿದೆ ಎಂದು ವಿವರಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿ ರೇವಣ್ಣ, ಪ್ರತಿ ಪಂಚಾಯಿತಿಯಲ್ಲಿ ಒಂದೊಂದು ಹಳ್ಳಿ ಆಯ್ಕೆ ಮಾಡಿಕೊಂಡು ಪೈಲಟ್‌ ಯೋಜನೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಮಾವು, ಹಲಸು, ಹುಣಸೆ, ಅಡಿಕೆ, ತೆಂಗು, ಸಪೋಟ ಬೆಳೆಸಿ ರೈತರಿಗೆ ವಿತರಿಸಬೇಕು. ಬೆಳೆ ಹಾನಿ ವರದಿ ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಎಚ್.ಕೆ ಕುಮಾರಸ್ವಾಮಿ, ಸಿ.ಎನ್.ಬಾಲಕೃಷ್ಣ. ಕೆ.ಎಸ್.ಲಿಂಗೇಶ್ ಅವರು ಬೆಳೆ ವಿಮೆ ಪರಿಹಾರ ವಿತರಣೆಯಲ್ಲಾಗುತ್ತಿರುವ ವಿಳಂಬದ ಬಗ್ಗೆ ಪ್ರಸ್ತಾಪಿಸಿ, ವಿಮೆ ಹಣ ಕಟ್ಟಿಸಿಕೊಳ್ಳುವಾಗಲೆ ಅಗತ್ಯ ದಾಖಲೆ ಪಡೆಯಬೇಕಿತ್ತು. ಈಗ ಸರಿಯಾದ ವಿವರಗಳು ಲಭ್ಯವಿಲ್ಲ ಎಂಬ ಕಾರಣ ನೀಡಲಾಗುತ್ತಿದೆ ಎಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕ ಮಧುಸೂದನ್, 2016 ನೇ ಸಾಲಿನಲ್ಲಿ ಬೆಳೆ ವಿಮೆ ಪರಿಹಾರ ಬಂದಿದ್ದು, ಅದರಲ್ಲಿ 8000 ರೈತರ ಬ್ಯಾಂಕ್ ಖಾತೆ ಬಗ್ಗೆ ಕೆಲವು ಪೂರಕ ವಿವರಗಳು ಬೇಕಾಗಿವೆ. ವಿಮಾ ಸಂಸ್ಥೆ ಅವುಗಳನ್ನು ಸಂಗ್ರಹಿಸುತ್ತಿದೆ. 2017 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ₹1667 ಲಕ್ಷ ಪರಿಹಾರ ಹಣ ಬಂದಿದ್ದು, ಇದರಲ್ಲಿ ₹ 825 ಲಕ್ಷ ವಿತರಿಸಲಾಗಿದೆ. ಉಳಿದದ್ದನ್ನು ಇನ್ನೊಂದು ವಾರದಲ್ಲಿ ವಿಲೇವಾರಿ ಮಾಡಲಾಗುವುದು ಎಂದರು.

ರೈತರಿಗೆ ಸಕಾಲದಲ್ಲಿ ಸಾಲ ವಿತರಿಸದೆ ಇರುವ ಹಾಗೂ ಬೆಳೆ ಪರಿಹಾರ ಹಣವನ್ನು ಸಾಲದ ಮೊತ್ತಕ್ಕೆ ಕಡಿತ ಮಾಡಿಕೊಳ್ಳುವ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಪಶುಭಾಗ್ಯ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಸಮರ್ಪಕವಾಗಿಲ್ಲ. ಲಾಟರಿ ಮೂಲಕ ಅರ್ಹ ಬಡವರಿಗೆ ಸೌಲಭ್ಯ ಒದಗಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಅರಣ್ಯ ಜಮೀನಿನಲ್ಲಿ ಹಿಂದಿನಿಂದ ಮನೆ ಕಟ್ಟಿಕೊಂಡಿರುವ ಬಡವರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರ ನೀಡಬೇಕು. ಅದರ ಬದಲು ಅವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದ್ದು, ಇದನ್ನು ನಿಲ್ಲಿಸಬೇಕು’ ಎಂಬ ಶಿವಲಿಂಗೇಗೌಡರ ಮನವಿಗೆ ಸ್ಪಂದಿಸಿದ ಸಚಿವರು, ‘ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿಕೊಡಬೇಕು’ ಎಂದು ಸೂಚಿಸಿದರು.

ಸಭೆಯಲ್ಲಿ ಶಾಸಕ ಪ್ರೀತಂ ಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಉಪಾಧ್ಯಕ್ಷ ಶ್ರೀನಿವಾಸ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಹಾಜರಿದ್ದರು.

ನಕಲಿ ಬಿತ್ತನೆ ಬೀಜಕ್ಕೆ ಕಡಿವಾಣ

ಜಿಲ್ಲೆಯಲ್ಲಿ ಯಾವುದೇ ಸಂಸ್ಥೆಗಳು, ವ್ಯಾಪಾರಿಗಳು, ಕಳಪೆ ರಸಗೊಬ್ಬರ, ನಕಲಿ ಬಿತ್ತನೆ ಬೀಜ ಮಾರಾಟ ಮಾಡುವುದು ಹಾಗೂ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ದರ ಪಡೆಯುವುದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದರು.

ಹಾಸ್ಟೆಲ್‌ ನಲ್ಲಿ ವಾಸ್ತವ್ಯ ಮಾಡಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿ ವಾರ್ಡನ್ ಗಳು ವಾಸ್ತವ್ಯ ಮಾಡಬೇಕು. ಅನುಪಸ್ಥಿತಿ ಕಂಡು ಬಂದಲ್ಲಿ ಸೇವೆಯಿಂದ ಅಮಾನತ್ತುಗೊಳಿಸಲಾಗುವುದು ಎಂದು ರೇವಣ್ಣ ಹೇಳಿದರು.

ಸರ್ವೆ ಕಾರ್ಯ ಶೀಘ್ರ ಮುಗಿಸಿ ಜಿಲ್ಲೆಯಲ್ಲಿ ಬಾಕಿ ಇರುವ ಸರ್ವೆ ಕಾರ್ಯವನ್ನು ಬೇಗ ಮುಗಿಸಬೇಕು. ಸಬೂಬು ಹೇಳುತ್ತಾ ರೈತರಿಗೆ ಸಂಕಷ್ಟ ನೀಡಬಾರದು. ಕಂದಾಯ ಇಲಾಖೆ ಜೊತೆಗೆ ಸಮನ್ವಯ ಸಾಧಿಸಿ ಸಮಸ್ಯೆ ಬಗೆಹರಿಸಿ ಎಂದು ಜಿಲ್ಲಾ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕರಿಗೆ ಸಚಿವರು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.