ADVERTISEMENT

ಚುನಾವಣೆ ವೇಳೆ ಅಹಿತಕರ ಘಟನೆ: ಕ್ರಮಕ್ಕೆ ಸರ್ವ ಪಕ್ಷ ನಿರ್ಣಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 9:10 IST
Last Updated 4 ಜನವರಿ 2011, 9:10 IST

ಆಲೂರು: ತಾಲ್ಲೂಕಿನಲ್ಲಿ ನಡೆದ ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ನಡೆದ ಕೆಲವು ಅಹಿತಕರ ಘಟನೆಗೆ ಕಾರಣರಾದವರನ್ನು ಖಂಡಿಸಿ ಇಂತವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂಬ ನಿರ್ಣಯಕ್ಕೆ ಸರ್ವ ಪಕ್ಷದ ಮುಖಂಡರುಗಳು ಪಟ್ಟಣದ ಗಣಪತಿ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಸಮ್ಮತಿ ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಚ್.ಪಿ.ಮೋಹನ್, ರಾಜಕಾರಣದಲ್ಲಿ ಈ ಹಿಂದೆಯೂ ಚಿಕ್ಕಪುಟ್ಟ ಗಲಭೆ ನಡೆದರೂ ಕೋರ್ಟು ಮೆಟ್ಟಿಲೇರದೇ ಸಂಧಾನದಲ್ಲಿ ಮುಕ್ತಾಯ ಗೊಳುತ್ತಿದ್ದವು. ಆದರೆ, ಈ ಬಾರಿ ಕೆಲ ರಾಜಕೀಯ ಮುಖಂಡರು ಚಿಕ್ಕ ಪುಟ್ಟ ಘಟನೆ ದೊಡ್ಡದು ಮಾಡಿ ಕೆಟ್ಟ ರಾಜಕೀಯ ಸಂಸ್ಕೃತಿಗೆ ನಾಂದಿ ಹಾಡಿದ್ದಾರೆ. ಇಂತವರನ್ನು ಎಲ್ಲರು ಖಂಡಿಸಬೇಕು ಎಂದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರವಾಗಿ ಕಾರ್ಯಕರ್ತರು ಕೆಲಸ ಮಾಡುವುದು ಸರ್ವೇಸಾಮಾನ್ಯ. ಚುನಾವಣೆ ನಂತರ ಎಲ್ಲರೂ ಅಣ್ಣ-ತಮ್ಮಂದಿರಂತೆ ಇರಬೇಕು. ದ್ವೇಷ ಸಾಧಿಸುವುದು ಸಮಾಜಕ್ಕೆ ಮಾರಕ. ಇನ್ನು ಮುಂದೆ ಈ ರೀತಿಯಾಗದಂತೆ ಎಲ್ಲರೂ ನೋಡಿಕೊಳ್ಳಬೇಕು ಎಂದರು.

ಬಿ.ಎಸ್.ಪಿ.ಮುಖಂಡ ಬಿ.ಸಿ.ಶಂಕರಾಚಾರ್, ಈವರೆಗೂ ತಾಲ್ಲೂಕಿನಲ್ಲಿ ಎಲ್ಲಾ ಪಕ್ಷದವರು ಸಹೋದರಂತೆ ಬಾಳುತಿದ್ದರು. ಆದರೆ ಈ ಬಾರಿ ಸೇಡಿನ ರಾಜಕಾರಣ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುವರ ವಿರುದ್ಧ ಹೊರಾಡಬೇಕಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಹುಣಸವಳ್ಳಿ ಮಜುನಾಥ್ ಮಾತನಾಡಿ ಇಂತಹ ಕೃತ್ಯಗಳಿಗೆ ಬಿಜೆಪಿ ಸರ್ಕಾರವೇ ನೇರ ಹೊಣೆ. ಯಾರು ಸಹ ಪ್ರಚೋದನೆಗಳಿಗೆ ಕಿವಿಗೊಡದೇ ಇರುವುದು ಸೂಕ್ತ ಎಂದರು. ಈ ಘಟನೆಗಳಲ್ಲಿ ತೊಂದರೆ ಅನುಭಸಿದವರು ಅಳಲನ್ನು ತೋಡಿಕೊಂಡರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎ.ಎಸ್.ನಿಂಗರಾಜ್, ಸದಸ್ಯ ಎಚ್.ಬಿ.ಧರ್ಮರಾಜ್, ಎ.ಎಚ್.ಲಕ್ಷ್ಮಣ್, ತಾ.ರೈತ ಸಂಘದ ಅಧ್ಯಕ್ಷ ಕಣಗಾಲ್ ಮೂರ್ತಿ, ಅಜ್ಜೇಗೌಡ, ಎಂ.ಬಿ.ಜಯಕಾಂತ್, ಕೆ.ಆರ್.ಲೋಕೇಶ್, ಜಿ.ಆರ್.ರಂಗನಾಥ್, ಪುರುಷೋತ್ತಮ್, ಶಾಂತಕೃಷ್ಣ, ಅಪ್ಪಾಜಿಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.