ADVERTISEMENT

ಜನರ ಸೇವೆಗೆ ಲಭ್ಯವಾಗದ ಶೌಚಾಲಯ!

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 10:05 IST
Last Updated 9 ಸೆಪ್ಟೆಂಬರ್ 2011, 10:05 IST

ಚನ್ನರಾಯಪಟ್ಟಣ: ಇಲ್ಲಿನ ಮಿನಿ ವಿಧಾನ ಸೌಧದ ಆವರಣದಲ್ಲಿರುವ ಶೌಚಾಲಯ ಉದ್ಘಾಟನೆಗೊಂಡು ಆರು ತಿಂಗಳಾದರೂ ಸೇವೆಗೆ ಲಭ್ಯವಿಲ್ಲ, ಆದರೆ ಪಂಚಾಯಿತಿ ನಡೆಸುವ, ಬೀಡಿ, ಸಿಗರೇಟು ಸೇದುವರ ತಾಣವಾಗಿದೆ.

ಪುರುಷರ, ಮಹಿಳೆಯರ ಶೌಚಾಲಯದಲ್ಲಿ ಜೇಡರ ಬಲೆ ಆವರಿಸಿದೆ. ಹಾಳು ಬಿದ್ದ ಮನೆಯಂತೆ ಗೋಚರಿಸುತ್ತದೆ. ಅದರಲ್ಲಿ ಅಳವಡಿಸಿರುವ ಶೌಚಾಲಯ ಪರಿಕರಗಳು ಹಾಳಾಗುವ ಸ್ಥಿತಿ ತಲುಪಿದೆ.

ಉದ್ಘಾಟನೆಗೊಂಡು ಸೇವೆಗೆ ಲಭ್ಯವಾಗಿಲ್ಲದ್ದರಿಂದ ಬೇಸತ್ತ ಪುರಸಭೆ ಮಾಜಿ ಸದಸ್ಯರೊಬ್ಬರು ಶೌಚಾಲಯದ ಬೀಗ ಮುರಿದು ಸೇವೆಗೆ ಅವಕಾಶ ಕಲ್ಪಿಸಿದರು. ಆದರೆ ಕೆಲ ತಾಂತ್ರಿಕ ತೊಂದರೆಯಿಂದ ಸೇವೆಗೆ ಸ್ವಲ್ಪ ದಿನಗಳ ಕಾಲಾವಕಾಶಬೇಕಾಗುತ್ತದೆ ಎಂದು ಕಾರಣ ನೀಡಿದ              ಅಧಿಕಾರಿಗಳು ಅದಕ್ಕೆ ಮತ್ತೆ ಬೀಗ ಜಡಿದಿದ್ದರು.

ಈ ಸ್ಥಳ ಈಗ ಬೀಡಿ, ಸಿಗರೇಟು ಸೇದುವರ ಹಾಗೂ ರಾಜೀ ಪಂಚಾಯಿತಿ ಮಾಡುವ ಕೇಂದ್ರವಾಗಿದೆ. ಬೀಡಿ, ಸಿಗರೇಟುಗಳ ತುಂಡುಗಳು ಹೇರಳವಾಗಿ ಬಿದ್ದಿದೆ.

ಕಚೇರಿ ಕೆಲಸಕ್ಕಾಗಿ ದಿನನಿತ್ಯ ಮಿನಿವಿಧಾನ ಸೌಧಕ್ಕೆ ಆಗಮಿಸುವ  ಜನತೆ ನೈಸರ್ಗಿಕ ಕ್ರಿಯೆ ತೀರಿಸಿಕೊಳ್ಳಲು ಪರದಾಡುವಂತಾಗಿದೆ. ಜನತೆ ಶೌಚಾಲಯದ ಪಕ್ಕದಲ್ಲಿರುವ ಗೋಡೆ ಮರೆಯಲ್ಲಿ ಬಹಿರ್ದೆಸೆಗೆ ಹೋಗುವಂತಾಗಿದೆ.

ಸೆ. 17 ಮತ್ತು 18 ರಂದು ಮಾಧ್ಯಮಿಕ ಶಾಲಾ ಆವರಣದಲ್ಲಿ ~ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ~ ಜರುಗುವುದರಿಂದ ತಾಲ್ಲೂಕು ಆಡಳಿತ ಕೂಡಲೇ ಎಚ್ಚೆತ್ತು  ಶೌಚಾಲಯವನ್ನು ಸೇವೆಗೆ ಒದಗಿಸಬೇಕು ಎಂದು ಜನತೆ ಆಗ್ರಹಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.