ADVERTISEMENT

ಜಲ ಮರುಪೂರಣ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 9:20 IST
Last Updated 16 ಜೂನ್ 2012, 9:20 IST

ಹಾಸನ: ಹಾಸನ ಜಿಲ್ಲಾ ಪಂಚಾಯಿತಿ ಕೊಳವೆ ಬಾವಿಗಳ ಮೂಲಕ ಭೂಮಿಗೆ ಜಲ ಮರುಪೂರಣ ಮಾಡುವಂಥ ವೈಜ್ಞಾನಿಕ ಯೋಜನೆಯನ್ನು ಕೈಗೆತ್ತಿ ಕೊಂಡಿದ್ದು, ಶುಕ್ರವಾರ ತಾಲ್ಲೂಕಿನ ಬೈಲಹಳ್ಳಿಯಲ್ಲಿ ಇದಕ್ಕೆ ಚಾಲನೆ ನೀಡಲಾಯಿತು.

ಬೈಲಹಳ್ಳಿಯ ರೈತ ಶಿವಣ್ಣ ಎಂಬುವವರ ಹೊಲದಲ್ಲಿರುವ ಕೊಳವೆ ಬಾವಿಯಲ್ಲಿ ಪ್ರಾಯೋಗಿಕ ವಾಗಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಮುಂದಿನ ಆರು ತಿಂಗಳಲ್ಲಿ ಪ್ರತಿ ತಾಲ್ಲೂ ಕಿನಲ್ಲೂ 15ರಿಂದ 20ರಂತೆ ಒಟ್ಟಾರೆ 200 ಕೊಳವೆ ಬಾವಿಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗುವುದು ಎಂದು ಜಿ.ಪಂ. ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ ತಿಳಿಸಿದರು. ಪ್ರಯೋಗಿಕ ಯೋಜನಾ ಸ್ಥಳದಲ್ಲೇ ಅವರು ಪತ್ರಕರ್ತರಿಗೆ ಯೋಜನೆಯ ಮಾಹಿತಿ ನೀಡಿದರು.

`ಭೂಮಿಯಿಂದ ತೆಗೆದ ನೀರಿನಷ್ಟೇ ನೀರನ್ನು ಮರಳಿ ಭೂಮಿಗೆ ನೀಡದಿದ್ದರೆ ಪ್ರಕೃತಿಯಲ್ಲಿ ಅಸಮತೋಲನ ಉಂಟಾ ಗುತ್ತದೆ. ನಾವು ಈಗಾಗಲೇ ಅದರ ಬಿಸಿಯನ್ನು ಅನುಭವಿಸುತ್ತಿದ್ದೇವೆ. ಹಿಂದೆ ಒಡ್ಡು, ಬಂಡುಗಳನ್ನು ನಿರ್ಮಿಸಿ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡಲಾಗುತ್ತಿತ್ತು. ಈಚೆಗೆ ಕೆಲವೆಡೆ ಇಂಗು ಗುಂಡಿಗಳ ಮುಖಾಂತರ ಆ ಕಾರ್ಯ ಮಾಡಲಾಗುತ್ತಿದೆ. ಆದರೆ ಕೊಳವೆ ಬಾವಿಗಳ ಮೂಲಕ ಭೂಮಿಯ ಆಳಕ್ಕೆ ನೀರನ್ನು ಮರು ಪೂರಣ ಮಾಡಬಹುದಾಗಿದೆ. ಇದು ಹೆಚ್ಚು ವೈಜ್ಞಾನಿಕ ವಿಧಾನ ಮತ್ತು ಇದರಲ್ಲಿ ನಾವು ನೂರಕ್ಕೆ ನೂರರಷ್ಟು ಯಶಸ್ಸು ಸಾಧಿಸಬಹುದು ಎಂದರು.

ಕೊಳವೆ ಬಾವಿಯ ಸುತ್ತ 3 ಮೀಟರ್ ಅಗಲ, 3 ಮೀಟರ್ ಉದ್ದ ಹಾಗೂ ಮೂರು ಮೀಟರ್ ಆಳದ ಒಂದು ಗುಂಡಿ ತೋಡಲಾಗುವುದು. ಕೊಳವೆ ಬಾವಿಯ ಕೇಸಿಂಗ್  ಪೈಪ್‌ಗೆ ಮೇಲಿನ ಒಂದು ಅಡಿಯನ್ನು ಬಿಟ್ಟು ಕೆಳಗೆ ಸುತ್ತ ಸುಮಾರು 100ರಿಂದ 120 ಸಣ್ಣ ತೂತುಗಳನ್ನು ಕೊರೆದು, ಅದರ ಸುತ್ತ ಪ್ಲಾಸ್ಟಿಕ್‌ನ ಸೊಳ್ಳೆ ಪರದೆ ಸುತ್ತಲಾಗುವುದು.

ಇದಾದ ಬಳಿಕ ಗುಂಡಿಯಲ್ಲಿ ಮೊದಲು ಒಂದು ಮೀಟರ್‌ವರೆಗೆ 40 ಮಿ.ಮೀ. ಗಾತ್ರದ ಜಲ್ಲಿ, ನಂತರದ ಒಂದು ಮೀಟರ್‌ವರೆಗೆ 20 ಮಿ.ಮೀ. ಗಾತ್ರದ ಜಲ್ಲಿ ಹಾಗೂ ಮೇಲಿನ ಒಂದು ಮೀಟರ್‌ನಲ್ಲಿ ಮರ ಳನ್ನು ತುಂಬಿ ಮುಚ್ಚಲಾಗುತ್ತದೆ. ಸುತ್ತಲಿನ ಹೊಲ ಅಥವಾ ಅಚ್ಚುಕಟ್ಟು ಪ್ರದೇಶದಿಂದ ಹರಿದು ಬಂದ ನೀರು ಈ ಗುಂಡಿಗೆ ಬಿದ್ದು, ಮರಳು, ಜಲ್ಲಿ ಹಾಗೂ ಸೊಳ್ಳೆ ಪರದೆಯ ಮೂಲಕ ಸೋಸಿ ದಂತಾಗಿ ಕೊಳವೆ ಬಾವಿ ಯನ್ನು ಸೇರುವುದು. ಒಂದು ಮಳೆಗಾಲ ಮುಗಿಯು ವಷ್ಟರಲ್ಲಿ ಕೊಳವೆಬಾವಿಯ ನೀರಿನ ಪ್ರಮಾಣದಲ್ಲಿ ಏರಿಕೆಯಾಗು ವುದು ಖಚಿತ~ ಎಂದು ಸತ್ಯನಾರಾಯಣ ತಿಳಿಸಿದರು.

ಬೈಲಹಳ್ಳಿಯಲ್ಲಿ ಶಿವಣ್ಣಅವರ ಹೊಲದಲ್ಲಿ ನಿರ್ಮಿಸಿರುವ ಈ ಗುಂಡಿಗೆ ಸುಮಾರು ಐದು ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಬಿದ್ದ ನೀರು ಹರಿದು ಬರುವಂತೆ ಮಾಡಲಾಗಿದೆ. ಈ ಗುಂಡಿ ಮೂಲಕ ಬೇಸಿಗೆಯಲ್ಲಿ ಭೂಮಿಯಿಂದ ತೆಗೆದಷ್ಟೇ ನೀರನ್ನು ಮತ್ತೆ ಭೂಮಿಯಲ್ಲಿ ಪೂರಣ ಮಾಡಬಹುದು ಅಥವಾ ಕನಿಷ್ಠ ಎಂದರೂ ಶೇ 80ರಷ್ಟು ನೀರನ್ನು ಕೊಡಬಹುದು ಎಂದು ನಿರೀಕ್ಷಿಸಲಾಗಿದೆ.

`ಇಂಥ ಒಂದು ಇಂಗು ಗುಂಡಿ ನಿರ್ಮಾಣಕ್ಕೆ ಗರಿಷ್ಠ ಎಂದರೂ 25 ಸಾವಿರ ರೂಪಾಯಿ ವೆಚ್ಚ ಬರುತ್ತದೆ. ರೈತರು ತಮ್ಮ ಹೊಲ ದಲ್ಲಿರುವ ಕೊಳವೆ ಬಾವಿಯ ಸುತ್ತ ಇಂಥ ಗುಂಡಿ ನಿರ್ಮಿಸಲು ಮುಂದಾದರೆ ವೆಚ್ಚವನ್ನು ಜಿ.ಪಂ. ನಿಂದ ಭರಿಸಲಾಗುವುದು~ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಟಿ. ಅಂಜನಕುಮಾರ್ ತಿಳಿಸಿದರು.

ಪ್ರಸಕ್ತ ಪ್ರಾಯೋಗಿಕವಾಗಿ 20 ಗುಂಡಿಗಳನ್ನು ನಿರ್ಮಿಸಲಾಗುವುದು. ಇದಾಗಿ ಆರು ತಿಂಗಳ ಬಳಿಕ ವಿವಿಧ ತಾಲ್ಲೂಕುಗಳಲ್ಲಿ ಇನ್ನೂ 180 ಗುಂಡಿಗಳನ್ನು ನಿರ್ಮಿಸಲಾಗುವುದು. ಜಲಾನಯನ ಇಲಾಖೆಯ ಮೂಲಕ ಯೋಜನೆಯನ್ನು ಜಾರಿ ಮಾಡಲಾಗು ವುದು. ಅರಸೀಕೆರೆಯ ಕೆಲವು ಭಾಗಗಳಲ್ಲಿ ಫ್ಲೋರೈಡ್ ಸಮಸ್ಯೆ ಇದ್ದು, ಈ ಯೋಜನೆಯ ಮೂಲಕ ಫ್ಲೋರೈಡ್ ಸಮಸ್ಯೆಗೂ ಪರಿಹಾರ ಕಂಡುಕೊಳ್ಳ ಬಹುದು ಎಂದು ಅವರು ತಿಳಿಸಿದರು.
ಸುತ್ತಲಿನ ಮಲಿನ ನೀರು ಭೂಮಿ ಯೊಳಗೆ ಸೇರುವ ಅಪಾಯ ವಿರುವುದರಿಂದ ಪಕಿಟ್ಟಣಗಳಲ್ಲಿ ಈ ಯೋಜನೆ ಜಾರಿಗೆ ಸೂಕ್ತವಲ್ಲ.

ನೀರಿನ ಸಮಸ್ಯೆ ಇಲ್ಲ: ಜಿಲ್ಲೆಯ ವಿವಿಧ ತಾಲ್ಲೂಕು ಗಳಲ್ಲಿ ಬರ ಇದ್ದರೂ ಏಪ್ರಿಲ್ ತಿಂಗಳಲ್ಲಿ ಮಳೆಯಾಗಿರು ವುದರಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆ ಈವರೆಗೆ ಉಂಟಾಗಿಲ್ಲ. ಇದೇ ಸ್ಥಿತಿ ಇನ್ನೂಕೆಲವು ದಿನ ಮುಂದು ವರಿದರೆ ಕೆಲವು ಭಾಗಗಳಲ್ಲಿ ಸಮಸ್ಯೆಯಾಗಬಹುದು ಎಂದು ಅಂಜನ್ ಕುಮಾರ್ ನುಡಿದರು.

ಈಗಾಗಲೇ ಬತ್ತಿ ಹೋಗಿರುವ ಕೊಳವೆಬಾವಿಗಳನ್ನು ಫ್ಲಷ್ ಮಾಡುವ ಅಥವಾ ಇನ್ನೂ ಆಳಕ್ಕೆ ಕೊರೆಯಿಸುವ ಕಾರ್ಯವನ್ನು ಹಲವೆಡೆ ಮಾಡಲಾಗುತ್ತಿದೆ. ಇದರ ಜತೆಯಲ್ಲಿ ಕೆಲವು ಭಾಗಗಳಲ್ಲಿ ಈ ವರ್ಷ `ಹೈಡ್ರೋ ಫ್ರಾಕ್ಚರಿಂಗ್~ ತಂತ್ರಜ್ಞಾನವನ್ನೂ ಬಳಸಬೇಕೆಂದು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.