ADVERTISEMENT

ಜಿಲ್ಲೆಯ ಅಭಿವೃದ್ಧಿಗೆ ಮಾರ್ಗದರ್ಶನ ನೀಡಲಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 6:47 IST
Last Updated 15 ಜುಲೈ 2017, 6:47 IST
ಜಿಲ್ಲೆಯ ಅಭಿವೃದ್ಧಿಗೆ ಮಾರ್ಗದರ್ಶನ ನೀಡಲಿ
ಜಿಲ್ಲೆಯ ಅಭಿವೃದ್ಧಿಗೆ ಮಾರ್ಗದರ್ಶನ ನೀಡಲಿ   

ಹಾಸನ: ‘ಆಧಾರ ರಹಿತ ಆರೋಪ ಮಾಡುವುದನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಸಂಸದ ಎಚ್‌.ಡಿ.ದೇವೇಗೌಡರು ಮಾರ್ಗದರ್ಶನ ನೀಡಬೇಕು’ ಎಂದು ಸಚಿವ ಎ.ಮಂಜು ಸಲಹೆ ನೀಡಿದರು.  ‘ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ ಎಂಬುದು ಸುಳ್ಳು. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮುಖ್ಯಮಂತ್ರಿಗೆ ಪತ್ರ ಬರೆಯುವುದನ್ನು ಬಿಟ್ಟು ನನ್ನ ಜತೆ ಚರ್ಚಿಸಬಹುದಿತ್ತು. ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ನೀಡಲು ಪ್ರಯತ್ನಿಸಲಾಗುವುದು.

ನನ್ನ ಅಧಿಕಾರ ಅವಧಿಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಸೂಕ್ತ ಸಮಯದಲ್ಲಿ ಶ್ವೇತ ಪತ್ರದ ರೂಪದಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ಗೂರೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

‘ದೇವೇಗೌಡ ಮತ್ತು ಅವರ ಮಕ್ಕಳು ಅಧಿಕಾರದಲ್ಲಿದ್ದಾಗ ಕೇವಲ ಹೊಳೆನರಸೀಪುರ ಮಾತ್ರ ಅಭಿವೃದ್ಧಿ ಪಡಿಸಿದರು. ಹೊಳೆನರಸೀಪುರದ ಹಂಗರಹಳ್ಳಿಯಲ್ಲಿ ರೈಲ್ವೆ ಸೇತುವೆ ಮಾಡಿಸುತ್ತಾರೆ ಹಾಸನದಲ್ಲಿ ಏಕೆ ಆಗುವುದಿಲ್ಲ. ಚುನಾವಣೆ ಸಮೀಪಿಸುತ್ತಿದೆ ಎಂಬ ಕಾರಣಕ್ಕೆ ಈ ರೀತಿ ಮಾತನಾಡಬಾರದು’ ಎಂದು ಟೀಕಿಸಿದರು.

ADVERTISEMENT

‘ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ 25–30 ಸ್ಥಾನ ಬರಬಹುದು. ಅಧಿಕಾರ ಇಲ್ಲದೆ ಏನು ಅಭಿವೃದ್ಧಿ ಮಾಡುತ್ತಾರೆ. ನನ್ನ ವರ್ತನೆ ಸರಿಯಿಲ್ಲ ಎಂದು ಒಬ್ಬ ಅಧಿಕಾರಿ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ನನ್ನ ತಂದೆ ಎರಡು ಪದವಿ ಕೊಡಿಸಿದ್ದಾರೆ. ಯಾರ ಜತೆ ಹೇಗೆ ನಡೆದುಕೊಳ್ಳಬೇಕು ಎಂಬುದು ಗೊತ್ತು’ ಎಂದು ತಿರುಗೇಟು ನೀಡಿದರು.

ಹೇಮಾವತಿ ಜಲಾಶಯದಲ್ಲಿ ನೀರಿನ ಕೊರತೆ ಇರುವುದರಿಂದ ವ್ಯವಸಾಯಕ್ಕೆ ತೊಂದರೆ ಆಗಿದೆ. ರೈತರು ಯಾವ ಬೆಳೆ ಬೆಳೆಯಬೇಕು ಎಂಬುದನ್ನು ಅಧಿಕಾರಿಗಳ ಜತೆ ಚರ್ಚಿಸಿ ಮಾಹಿತಿ ನೀಡಲಾಗುವುದು.  ಕುಡಿಯುವ ನೀರು, ಕೃಷಿ ಬಳಕೆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಫೆ. 7ರಿಂದ ನಡೆಯುವ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಸಂಬಂಧಿಸಿದ ಕಾಮಗಾರಿಗಳು ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಳ್ಳಲಿವೆ. ಯಾವುದೇ ಆತಂಕ ಬೇಡ. ಈಗ ತಂತ್ರಜ್ಞಾನ ಮುಂದುವರಿದಿರುವುದರಿಂದ ಕೆಲಸ ತ್ವರಿತವಾಗಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹೊಸ ಬಸ್‌ ನಿಲ್ದಾಣ ಬಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಭೂ ಸ್ವಾದೀನ ಇಲ್ಲದೆ ಯೋಜನೆ ತಯಾರಿಸಿ ವರದಿ ಸಲ್ಲಿಸಲಾಗಿದೆ. ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೀರಿನ ಸಂಗ್ರಹ
ಕಳೆದ ವರ್ಷ ಇದೇ ಅವಧಿಗೆ 16 ಟಿಎಂಸಿ ಅಡಿ ನೀರಿತ್ತು. ಪ್ರಸ್ತುತ 7.41 ಟಿಎಂಸಿ ಅಡಿ ನೀರು ಸಂಗ್ರಹ ಇದೆ.  ಜಲಾಶಯ ನಿರ್ಮಾಣಗೊಂಡಾಗಿನಿಂದ ನಾಲ್ಕು ಬಾರಿ ನೀರಿನ ಸಂಗ್ರಹ ತೀರಾ ಕಡಿಮೆ ಇದೆ. ಯಗಚಿ ಜಲಾಶಯದಲ್ಲಿ ಒಳ ಹರಿವು ಶೂನ್ಯ. ಕಳೆ ಬಾರಿ ಇದೇ ಅವಧಿಗೆ 4.24 ಟಿಎಂಸಿ ಅಡಿ ಇತ್ತು ಎಂದು ಮಂಜು ವಿವರಿಸಿದರು.

‘ಗೌಡರು ಕಷ್ಟದಲ್ಲಿದ್ದಾಗ ಜತೆಯಲ್ಲಿದ್ದೆ’
‘ಎಚ್‌.ಡಿ.ದೇವೇಗೌಡರು ಕಷ್ಟದಲ್ಲಿದ್ದ ಸಂದರ್ಭದಲ್ಲಿ ಜತೆಯಲ್ಲಿದ್ದೆ. ಆಗ ಅವರು ಮಕ್ಕಳು ಇರಲಿಲ್ಲ. ಇದನ್ನು  ನೆನಪು ಮಾಡಿಕೊಳ್ಳಬೇಕು’ ಎಂದು ಸಚಿವ ಮಂಜು ಹೇಳಿದರು. ‘1993ರಲ್ಲಿ  ಚುನಾವಣೆಗೆ ಸ್ಪರ್ಧಿಸಿದ್ದಾಗ ಅರಕಲಗೂಡು ಕ್ಷೇತ್ರದಲ್ಲಿ ಗೌಡರ ಪರವಾಗಿ ಮತ ಹಾಕಿಸಿದ್ದೇನೆ. ಅವರು ರಾಜಕೀಯ ಪುನರ್ಜನ್ಮ ಪಡೆಯಲು ನನ್ನ ಸೇವೆಯೂ ಇದೆ. ಈಗ ಎಲ್ಲವನ್ನು ಮರೆತಿರುವ ಗೌಡರು, ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

* * 

ಮೋಡ ಬಿತ್ತನೆಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜುಲೈ 26 ರಿಂದ ಕಾರ್ಯಾರಂಭ ಆಗಬಹುದು
ಎ.ಮಂಜು
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.