ADVERTISEMENT

ಜಿಲ್ಲೆಯ ನಾಲ್ಕು ಸ್ಥಾನ ಕೆಜೆಪಿ ಮಡಿಲಿಗೆ; ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 7:11 IST
Last Updated 9 ಏಪ್ರಿಲ್ 2013, 7:11 IST

ಸಕಲೇಶಪುರ: ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣ ಮೇಳೈಸಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ಜಿಲ್ಲೆಯಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಹೊರ ಹಾಕುವ ವ್ಯವಸ್ಥಿತ ಪಿತೂರಿ ಮುಂದುವರಿದಿದೆ ಎಂದು ಕೆಜೆಪಿ ಮುಖಂಡ ಎಚ್.ಎಂ.ವಿಶ್ವನಾಥ್ ಆರೋಪಿಸಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಕೆಜೆಪಿ ತಾಲ್ಲೂಕು ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ಯಶಸ್ವಿ ಆಡಳಿತವನ್ನು ಮೆಚ್ಚಿ ಜೆಡಿ(ಎಸ್)ನಿಂದ ಹಲವು ಕಾರ್ಯಕರ್ತರು ಕೆಜೆಪಿ ಸೇರ್ಪಡೆಗೊಳ್ಳು ತ್ತಿದ್ದಾರೆ. ಜಿಲ್ಲೆಯಲ್ಲಿ ಮತದಾರರು ಬದಲಾವಣೆ ಬಯಸಿದ್ದು, ಕೆಜೆಪಿ ನಾಲ್ಕು ಸ್ಥಾನ ಗಳಿಸಲಿದೆ ಎಂದರು.

ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ಆರ್.ಗುರುದೇವ್ ಮಾತನಾಡಿ, ಶಾಸಕ ಎಚ್.ಕೆ.ಕುಮಾರಸ್ವಾಮಿ ಅಭಿವೃದ್ಧಿ ಶೂನ್ಯ ಆಡಳಿತ ಪೂರ್ಣಗೊಳಿಸಿದ್ದು, ಕಳೆದ ಚುನಾವಣೆಯಲ್ಲಿ ವಿಶ್ವನಾಥ್ ಮತ್ತು ಅವರ ಬೆಂಬಲಿಗರ ಪ್ರಾಬಲ್ಯದಿಂದ ಗೆದ್ದರೆ ಹೊರತು ಸ್ವ ಸಾಮರ್ಥ್ಯದಿಂದಲ್ಲ.  ಈ ಚುನಾವಣೆಯಲ್ಲಿ ವಿಶ್ವನಾಥ್ ತಂಡದ ಬಲ ಇಲ್ಲ, ಅಭಿವೃದ್ಧಿ ಮಾಡಿದ ಮಾನದಂಡ ಸಹ ಇಲ್ಲದ ಕಾರಣ ಜೆಡಿ(ಎಸ್)ಗೆ ಸೋಲು ಖಚಿತ ಎಂದು ಭವಿಷ್ಯ ನುಡಿದರು.

ಪುರಸಭಾ ಮಾಜಿ ಅಧ್ಯಕ್ಷ ಮಲ್ನಾಡ್ ಜಾಕೀರ್ ಮಾತನಾಡಿದರು. ಸಭೆಯಲ್ಲಿ ಕೆಜೆಪಿ ಅಭ್ಯರ್ಥಿ ಬೆಳಗೋಡು ಉಮೇಶ್, ಪುರಸಭಾ ಮಾಜಿ ಅಧ್ಯಕ್ಷ ಎಚ್.ಎ. ಭಾಸ್ಕರ್, ಮಾಜಿ ಉಪಾಧ್ಯಕ್ಷ ಕಾಡಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರ್ವತಯ್ಯ, ಪುರಸಭಾ ಸದಸ್ಯ ರುದ್ರಕುಮಾರ್, ರೇಖಾ, ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.