ADVERTISEMENT

ಜೆಡಿಎಸ್ ಕೋಟೆಗೆ ಕಾಂಗ್ರೆಸ್, ಕೆಜೆಪಿ ಲಗ್ಗೆ

ವಿಧಾನ ಸಭಾ ಚುನಾವಣೆ -2013

ಪ್ರಜಾವಾಣಿ ವಿಶೇಷ
Published 4 ಏಪ್ರಿಲ್ 2013, 6:01 IST
Last Updated 4 ಏಪ್ರಿಲ್ 2013, 6:01 IST

ಸಕಲೇಶಪುರ: ಸಕಲೇಶಪುರ ಆಲೂರು ವಿಧಾನ ಸಭಾ ಕ್ಷೇತ್ರದಲ್ಲೂ ಚುನಾವಣೆ ಕಾವು ನಿಧಾನವಾಗಿ ಏರುತ್ತಿದೆ. ಜೆಡಿಎಸ್ ಹಾಗೂ ಕೆಜೆಪಿ ಈ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ ಕಾಂಗ್ರೆಸ್ ಮತ್ತು ಬಿಜೆಪಿ ಯಾರ ಹೆಸರು ಘೋಷಿಸು ತ್ತವೆ ಎಂಬ ಕುತೂಹಲ ಉಳಿದುಕೊಂಡಿದೆ.

ಸಕಲೇಶಪುರ-ಆಲೂರು-ಕಟ್ಟಾಯ ವಿಧಾನ ಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ನಂತರ ನಡೆಯುತ್ತಿರುವ ಎರಡನೇ ಚುನಾವಣೆ ಇದು. ಹಾಲಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರೇ ತಮ್ಮ ಅಭ್ಯರ್ಥಿ ಎಂದು ಜೆಡಿಎಸ್ ಅನೌಪಚಾರಿಕ ವಾಗಿ ಹೇಳಿಯಾಗಿದೆ. ಕೆಜೆಪಿ ಬೆಳಗೋಡು ಉಮೇಶ್ ತಮ್ಮ ಅಭ್ಯರ್ಥಿ ಎಂದು ಘೋಷಿಸಿದೆ.

ಮುಗಿಯದ ಕಾಂಗ್ರೆಸ್ ಗೊಂದಲ: ಜಿಲ್ಲೆಯ ಇತರ ಕ್ಷೇತ್ರಗಳಂತೆ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಸಕಲೇಶಪುರ ಕ್ಷೇತ್ರದಲ್ಲೂ ಗೊಂದಲ ನಿವಾರಣೆ ಆಗಿಲ್ಲ.
ತನಗೆ ಟಿಕೆಟ್ ಲಭಿಸಿದೆ ಎಂದು ಮಾಜಿ ಶಾಸಕ ಡಿ. ಮಲ್ಲೇಶ್ ಹೇಳಿದ್ದರೂ ಸ್ಥಳೀಯ ನಾಯಕರು, ಕಾರ್ಯಕರ್ತರು ಅದನ್ನು ಒಪ್ಪಲು ಸಿದ್ಧರಿಲ್ಲ.

20ವರ್ಷಗಳಿಂದ ಇಲ್ಲಿ ಕಾಂಗ್ರೆಸ್ ಗೆದ್ದಿಲ್ಲ, ಈ ಬಾರಿಯೂ ಗೆಲ್ಲದಿದ್ದರೆ ಕಾರ್ಯಕರ್ತರು ಬೇರೆ ಪಕ್ಷಕ್ಕೆ ಹೋಗುತ್ತಾರೆ. ಆದ್ದರಿಂದ ಮೋಟಮ್ಮ ಅವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸುವ ಪ್ರಯತ್ನ ಮಾಡ ಬೇಕು ಎಂದು ಕಾಂಗ್ರೆಸ್ ಒಂದು ವರ್ಗ ಒತ್ತಾಯಿಸುತ್ತಿದೆ.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಡಿ.ಸಿ. ಸಣ್ಣಸ್ವಾಮಿ, `ನಾನೂ ಆಕಾಂಕ್ಷಿ, ನನ್ನ ಹೆಸರೇ ಮುಂಚೂಣಿಯಲ್ಲಿದೆ. ಸ್ಥಳೀಯರಿಗೇ ಟಿಕೆಟ್ ಕೊಡಬೇಕು, ರಾಜ್ಯ ನಾಯಕಿ ಮೋಟಮ್ಮ ಬರುವು ದಾದರೆ ನಾನು ಸ್ವಾಗತಿಸುತ್ತೇನೆ' ಎಂದಿದ್ದಾರೆ.
ಸ್ಥಳಿಯ ವಕೀಲೆ ಶಾರದಾ ಕಾಳಿಂಗಪ್ಪ ಅವರ ಹೆಸರೂ ಅಲ್ಲಲ್ಲಿ ಕೇಳಿ ಬರುತ್ತಿದೆ.

ಬಿ.ಆರ್.ಗುರುದೇವ್ ಶಾಸಕರಾಗಿದ್ದ ಕಾಲದಲ್ಲಿ ಇಲ್ಲಿ ಕಾಂಗ್ರೆಸ್ ಭದ್ರವಾಗಿತ್ತು. ನಂತರದ 20 ವರ್ಷಗಳಲ್ಲಿ ಕಾಂಗ್ರೆಸ್ ಇಲ್ಲಿ ನೆಲಕಚ್ಚಿದೆ. ಪಕ್ಷಕ್ಕೆ ಮೂಲ ಮತದಾರರು ಇದ್ದರೂ, ನಾಯಕತ್ವ ಹಾಗೂ ಸಂಘಟನೆ ಕೊರತೆಯಿಂದ ಪಕ್ಷ ನಿರಂತರ ವಾಗಿ ಸೋಲು ಅನುಭವಿಸಬೇಕಾಗಿ ಬಂದಿದೆ. ಮಾಜಿ ಸಚಿವೆ ಮೋಟಮ್ಮಗೆ ಟಿಕೆಟ್ ನೀಡಿದರೆ ಪಕ್ಷ ಗೆಲ್ಲುವು ಖಚಿತ' ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿದ್ಯಾಶಂಕರ್ ನೇತೃತ್ವದಲ್ಲಿ ತಾಲ್ಲೂಕು ಕಾಂಗ್ರೆಸ್ ಮುಖಂಡರು ದೆಹಲಿಗೆ ನಿಯೋಗ ತೆರಳಿ ಒತ್ತಡ ಹೇರಿ ಬಂದಿದ್ದಾರೆ. ಕ್ಷೇತ್ರದ ಜನರಿಗೆ ಡಿ.ಮಲ್ಲೇಶ್ ಅಪರಿಚಿತರು. ಅವರು ಡಮ್ಮಿ ಅಭ್ಯರ್ಥಿ. ನಾವು ಕೆಲಸ ಮಾಡಿದರೂ ವ್ಯರ್ಥ' ಎಂದು ಪಕ್ಷದ ಕೆಲವರು ಬಹಿರಂಗವಾಗಿ ಹೇಳುತ್ತಿದ್ದಾರೆ.

ಇನ್ನು ಬಿಜೆಪಿ ಪಾಳಯದಲ್ಲಿ ಡಾ.ನಾರಾಯಣ ಸ್ವಾಮಿ ಹಾಗೂ ಸಂಜಯ್‌ಬಾಬು ಹೆಸರು ಕೇಳಿ ಬರುತ್ತಿದ್ದು, ಪಕ್ಷದ ಬಹುತೇಕ ಮುಖಂಡರು ಡಾ.ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ.

2004ರ ಚುನಾವಣೆಯಲ್ಲಿ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, 2008ರ ಚುನಾವಣೆಯಲ್ಲಿ ಹಾಲಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಆಯ್ಕೆ ಯಾಗುವ ಮೂಲಕ ಜೆಡಿಎಸ್ ಈ ಕ್ಷೇತ್ರವನ್ನು  ಭದ್ರಪಡಿಸಿಕೊಂಡಿದೆ. ಆ ಎರಡೂ ಚುನಾವಣೆ ಯಲ್ಲಿ ಎಚ್.ಎಂ.ವಿಶ್ವನಾಥ್ ಹಾಗೂ ಅವರ ತಂಡ ಪಕ್ಷಕ್ಕೆ ಬೆನ್ನೆಲುಬಾಗಿತ್ತು. ಕುಮಾರಸ್ವಾಮಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಮಾಡಿಲ್ಲ ಎಂಬ ಆರೋಪ ಹಾಗೂ ವಿಶ್ವನಾಥ್ ಅವರು ಪಕ್ಷ ಬಿಟ್ಟು ಕೆಜೆಪಿಗೆ ಹೋಗಿರುವುದರಿಂದ ಜೆಡಿಎಸ್ ಶಕ್ತಿ ಕೊಂಚ ಕುಗ್ಗಿದಂತೆ ಕಂಡು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.