ADVERTISEMENT

ಟಿಕೆಟ್ ನೀಡುವ ಪಕ್ಷಕ್ಕೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 6:53 IST
Last Updated 29 ಅಕ್ಟೋಬರ್ 2017, 6:53 IST
ಜ್ಯೋತಿಪ್ರಕಾಶ್ ಮಿರ್ಜಿ
ಜ್ಯೋತಿಪ್ರಕಾಶ್ ಮಿರ್ಜಿ   

ಹಾಸನ : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಮೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತರಿಗೆ ಟಿಕೆಟ್ ನೀಡಬೇಕು ಎಂದು ವಿಶ್ವ ವೀರಶೈವ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಜ್ಯೋತಿ ಪ್ರಕಾಶ್ ಮಿರ್ಜಿ ಒತ್ತಾಯಿಸಿದರು.

ಸಮಾಜದ ಹಿತದೃಷ್ಟಿಯಿಂದ ಒಕ್ಕೂಟ ರಚಿಸಲಾಗಿದ್ದು, ಯುವಕರಿಗೆ ಮಾರ್ಗದರ್ಶನ, ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ, ಹಿಂದುಳಿದವರನ್ನು ಮೇಲೆತ್ತುವುದು ಹಾಗೂ ಒಳಪಂಗಡಗಳೆನೆಲ್ಲಾ ಒಂದುಗೂಡಿಸುವ ಕೆಲಸವನ್ನು ಒಕ್ಕೂಟ ಮಾಡುತ್ತಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ವೀರಶೈವ ಲಿಂಗಾಯತ ಸಮಾಜದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಒಗ್ಗಟಿನಿಂದ ಇದ್ದಾರೆ. ಒಕ್ಕೂಟವೂ ಯಾವ ಸಮಾಜದ ಪರವೂ ಇಲ್ಲ, ವಿರುದ್ಧವೂ ಇಲ್ಲ. ಮಾನವೀಯತೆಯ ಪರಿಕಲ್ಪನೆಯಿಂದ ಬಸವಣ್ಣವರ ತತ್ವದಡಿಯಲ್ಲಿ ಸ್ಥಾಪಿಸಲಾಗಿದೆ ಎಂದು ಪ್ರತಿಪಾದಿಸಿದ ಅವರು, ಸಮುದಾಯ ಎಲ್ಲಾ ಸ್ವಾಮೀಜಿಗಳು, ಮುಖಂಡರನ್ನು ಒಗ್ಗೂಡಿಸಲಾಗುವುದು. ಮುಂದಿನ ದಿನಗಳಲ್ಲಿ ಸಮುದಾಯದ ಮಠಗಳ ಅಭಿವೃದ್ಧಿಗೆ ಪೂರಕವಾಗಿ ಒಕ್ಕೂಟ ಕೆಲಸ ಮಾಡಲಿದೆ ಎಂದು ತಿಳಿಸಿದರು.

ADVERTISEMENT

ಶಿಕ್ಷಣ, ವೈದ್ಯಕೀಯ, ವಿಜ್ಞಾನ, ಕೈಗಾರಿಕೆ ಸೇರಿದಂತೆ ಇತರೆ ಪ್ರಮುಖ ಕ್ಷೇತ್ರಗಳಲ್ಲಿ ವೀರಶೈವರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಈ ಹಿಂದೆ ರಾಜಕೀಯ ಕ್ಷೇತ್ರದಲ್ಲಿಯೂ ಹೆಚ್ಚಿನ ಶಾಸಕರು, ಸಂಸದರು ವೀರಶೈವ ಸಮುದಾಯದಿಂದ ಆಯ್ಕೆಯಾಗಿದ್ದರು. ಆದರೆ ಈಗ ಶಾಸಕರ ಸಂಖ್ಯೆ ಕಡಿಮೆ ಇದ್ದು, ಎಲ್ಲಾ ರಾಜಕೀಯ ಪಕ್ಷಗಳು ಸಮುದಾಯವನ್ನು ಕಡೆಗಣಿಸುತ್ತಿವೆ. ಹಾಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸಭೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಸಮುದಾಯ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಒಬ್ಬರು ಶಾಸಕರಿಲ್ಲ. ಎಲ್ಲಾ ಪಕ್ಷಗಳು ಅನ್ಯಾಯ ಮಾಡುತ್ತಿವೆ. ಎಲ್ಲರೂ ಒಗ್ಗಟ್ಟಾಗಿ ಮುಂದಿನ ಚುನಾವಣೆ ಎದುರಿಸಲು ಸಿದ್ಧರಾಗಬೇಕು. ಎಲ್ಲಾ ಮಠಾಧೀಶರು, ಸ್ವಾಮೀಜಿಗಳು ಬೆಂಬಲ ನೀಡಿದ್ದು. 2018ರ ಚುನಾವಣೆಯಲ್ಲಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಪಕ್ಷವನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದು ನುಡಿದರು. ಗೋಷ್ಠಿಯಲ್ಲಿ ಸಮುದಾಯ ಮುಖಂಡರಾದ ಶಿವಲಿಂಗಶಾಸ್ತ್ರಿ, ಕಾಂತರಾಜು, ವೀರಭದ್ರಯ್ಯ, ಕಟ್ಟಾಯ ಶಿವಕುಮಾರ್, ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.